ಕ್ಯಾನ್ಸರ್ನಿಂದ ಚಿಕಿತ್ಸೆ ಪಡೆಯುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಅವರು ಇಂದು(ಸೆ.03) ಮುಂಜಾನೆ ತಮ್ಮ 49 ನೇ ವಯಸ್ಸಿನಲ್ಲಿ ನಿಧನರಾದರು. ಹೀತ್ ಸ್ಟ್ರೀಕ್ ನಿಧನದ ಬಗ್ಗೆ ಅವರ ಪತ್ನಿ ನಾಡಿನ್ ಫೇಸ್ಬುಕ್ ಮೂಲಕ ಖಚಿತಪಡಿಸಿದ್ದಾರೆ.
“ಸೆಪ್ಟೆಂಬರ್ 3, 2023 ರ ಭಾನುವಾರದ ಮುಂಜಾನೆ, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ, ತನ್ನ ಕೊನೆಯ ದಿನಗಳನ್ನು ಕಳೆಯುತ್ತಿರುವ ಸಮಯದಲ್ಲಿ ದೇವತೆಗಳು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅವರು ನಮ್ಮನ್ನು ಬಿಟ್ಟು ಹೋದರೂ ಅವರೊಂದಿಗಿನ ನಮ್ಮ ಪ್ರೀತಿ ಶಾಶ್ವತವಾಗಿ ಇರುತ್ತದೆ” ಎಂದು ನಾಡಿನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶ-ದ್ವೇಷ ಮೀರಿ ನಿಂತ ನೀರಜ್ ಚೋಪ್ರಾ – ಭಾರತದ ನಿಜವಾದ ಕ್ರೀಡಾ ಜ್ಯೋತಿ
ಮಾಜಿ ಜಿಂಬಾಬ್ವೆ ಅಂತಾರಾಷ್ಟ್ರೀಯ ಆಟಗಾರ ಜಾನ್ ರೆನ್ನಿ ಕೂಡ ಹೀತ್ ಸ್ಟ್ರೀಕ್ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್ ತಂಡದ ನಾಯಕರಾಗಿದ್ದ ಹೀತ್ ಅವರು, ತಮ್ಮ ದೇಶದ ಪರ 1993-2005ರ ಅವಧಿಯಲ್ಲಿ 65 ಟೆಸ್ಟ್ಗಳಲ್ಲಿ 216 ವಿಕೆಟ್ಗಳು ಮತ್ತು 1,990 ರನ್ಗಳನ್ನು ಗಳಿಸಿದ್ದಾರೆ. 189 ಏಕದಿನ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಿಂದ 2,943 ರನ್ ಮತ್ತು 239 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಹೀತ್ ಅವರು ನಿವೃತ್ತಿಯ ನಂತರ, ಜಿಂಬಾಬ್ವೆ ಮತ್ತು ಬಾಂಗ್ಲಾದೇಶದಂತಹ ಹಲವಾರು ಅಂತಾರಾಷ್ಟ್ರೀಯ ತಂಡಗಳಿಗೆ ತರಬೇತುದಾರರಾಗಿದ್ದಾರೆ. ಅವರು ಐಪಿಎಲ್ನ ಕೆಕೆಆರ್ ತಂಡದ ಜೊತೆ ಸಹ ಸಂಬಂಧ ಹೊಂದಿದ್ದರು .