ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಕೆಆರ್ನ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಮುಖ್ಯ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರ ಅವಧಿ ಟಿ20 ವಿಶ್ವಕಪ್ ನಂತರ ಮುಕ್ತಾಯಗೊಳ್ಳಲಿದ್ದು, ಗಂಭೀರ್ ದ್ರಾವಿಡ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೀಘ್ರದಲ್ಲಿಯೇ ಗಂಭೀರ್ ಅವರನ್ನು ಬಿಸಿಸಿಐ ಮುಖ್ಯ ಕೋಚ್ ಆಗಿ ನೇಮಿಸಲಿದೆ. ಕೋಚ್ ಸ್ಥಾನ ಅಲಂಕರಿಸುವಂತೆ ಬಿಸಿಸಿಐನ ಮನವಿಯನ್ನು ಗಂಭೀರ್ ಒಪ್ಪಿಕೊಂಡಿದ್ದು, ಇದರ ಜೊತೆ ಗೌತಮ್ ಗಂಭೀರ್ ಅವರ ಕೆಲವು ಬೇಡಿಕೆಗಳಿಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.
“ಭಾರತ ತಂಡದ ಮುಖ್ಯ ಕೋಚ್ ನೇಮಕಕ್ಕೆ ಸಂಬಂಧಿಸಿದಂತೆ ನಾವು ಗಂಭೀರ್ ಅವರೊಂದಿಗೆ ಮಾತನಾಡಿದ್ದೇವೆ. ಟಿ20 ವಿಶ್ವಕಪ್ ನಂತರ ನಿರ್ಗಮಿಸುತ್ತಿರುವ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ಗಂಭೀರ್ ತುಂಬಲಿದ್ದಾರೆ” ಎಂದು ಮಾಧ್ಯಮವೊಂದಕ್ಕೆ ಬಿಸಿಸಿಐ ತಿಳಿಸಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ | ಬಾಂಗ್ಲಾ ವಿರುದ್ಧ ಜಯದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ
ತಮ್ಮ ನಿರ್ಧಾರದಂತೆ ಬೆಂಬಲಿತ ಸಿಬ್ಬಂದಿಯನ್ನು ನೇಮಸಿಕೊಂಡರೆ ತಾವು ಕೋಚ್ ಹುದ್ದೆಯನ್ನು ಒಪ್ಪಿಕೊಳ್ಳುವುದಾಗಿ ಗೌತಮ್ ಗಂಭೀರ್ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಗಂಭೀರ ಅವರ ಬೇಡಿಕೆಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಪ್ಪಿಕೊಂಡಿದ್ದು ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ರವಿ ಶಾಸ್ತ್ರಿ ಅವರು ಮುಖ್ಯ ಕೋಚ್ ಆಗಿದ್ದಾಗ ಸಂಜಯ್ ಬಂಗಾರ್ ಅವರನ್ನು ವಿಕ್ರಮ್ ರಾಥೋರ್ ಬದಲಿಗೆ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲಾಗಿತ್ತು. ದ್ರಾವಿಡ್ ಅವರು ಮುಖ್ಯ ಕೋಚ್ ಆದ ನಂತರ ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆದಿದ್ದರು.
ಪ್ರಸ್ತುತ ಪರಾಸ್ ಮಾಂಬ್ರೆ ಬೌಲಿಂಗ್ ಹಾಗೂ ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌತಮ್ ಗಂಭೀರ್ ಕೋಚ್ ಆದ ನಂತರವಷ್ಟೆ ಬೆಂಬಲಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನೊಂದು ಪ್ರಮುಖವಾದ ವಿಚಾರವೆಂದರೆ ಗಂಭೀರ್ ತಂಡದಲ್ಲೂ ಬದಲಾವಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಕೆಕೆಆರ್ನ ಮುಖ್ಯ ಕೋಚ್ ಹಾಗೂ ಮಾರ್ಗದರ್ಶಕರಾಗಿರುವ ಗಂಭೀರ್ ನೇತೃತ್ವದಲ್ಲಿ ತಂಡವು ಐಪಿಎಲ್ನಲ್ಲಿ 2024ರಲ್ಲಿ ಟ್ರೋಫಿಯನ್ನು ಎತ್ತಿಹಿಡಿದಿತ್ತು.
“ನಾನು ಭಾರತ ತಂಡದ ಕೋಚ್ ಆಗಲು ಇಷ್ಟಪಡುತ್ತೇನೆ.ನಮ್ಮ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸ್ಥಾನಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.ನೀವು 140 ಕೋಟಿ ಭಾರತೀಯರು ಹಾಗೂ ವಿಶ್ವವನ್ನು ಪ್ರತಿನಿಧಿಸುತ್ತೀರಿ” ಎಂದು ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಗಂಭೀರ್ ಹೇಳಿದ್ದರು.
ಗಂಭೀರ್ 2011ರ ಏಕದಿನ ವಿಶ್ವಕಪ್ ಹಾಗೂ 2007ರ ಟಿ20 ವಿಶ್ವಕಪ್ ಭಾರತ ವಿಜೇತ ತಂಡದ ಸದಸ್ಯರಾಗಿದ್ದರು.
