ಇಂದು ಚಂಡೀಘಡದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 18ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ವಿಜೇತರು ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆಯಲಿದ್ದು, ಫೈನಲ್‌ನಲ್ಲಿ ಸ್ಥಾನ ಪಡೆಯಲು ಜೂನ್ 1ರಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ. ಹಾಗೆ ಇಂದಿನ ಪಂದ್ಯ ಸೋತವರು ಟೂರ್ನಿಯಿಂದ ಹೊರ ಹೋಗಬೇಕಾಗಿದೆ.
ಮುಲ್ಲಾನಪುರ್ ಪಿಚ್ ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ನೆರವು ನೀಡಲಿದೆ. ಈ ಪಿಚ್ ಮೇಲೆ 200ರ ಗುರಿ ಇಟ್ಟುಕೊಂಡು ಬ್ಯಾಟ್ ಮಾಡುವುದು ಕಷ್ಟ. ಸ್ಪರ್ಧಾತ್ಮಕ ಮೊತ್ತದ ಬೆನ್ನು ಹತ್ತಿದರೆ ಸುಲಭವಾಗಿ ಕಲೆ ಹಾಕಬಹುದು. ಈ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಪಂದ್ಯದಲ್ಲೂ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ. ಟಾಸ್ ಗೆದ್ದ ತಂಡ ನಿಶ್ಚಿತವಾಗಿ ಫೀಲ್ಡಿಂಗ್ ಮಾಡಲು ಮುಂದಾಗಬಹುದು.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಸ್ಟಾರ್ ಆಟಗಾರರು ತಮ್ಮ ಶಿಸ್ತು ಬದ್ಧ ಆಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೊ ತಂಡಕ್ಕೆ ತಮ್ಮ ಅನುಭವವನ್ನು ಧಾರೆ ಎರೆಯಬಹುದು. ಇವರು ಬಿಗ್ ಇನಿಂಗ್ಸ್ ಕಟ್ಟಿದರೆ ಗೆಲುವು ಆಸೆಗೆ ಬುನಾದಿ ಹಾಕಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸೂರ್ಯಕುಮರ್ ಯಾದವ್, ಹಾರ್ದಿಕ್ ಪಾಂಡ್ಯ ತಂಡದ ಅಗತ್ಯದ ತಕ್ಕಂತೆ ಬ್ಯಾಟ್ ಮಾಡಿದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಇದನ್ನು ಓದಿದ್ದೀರಾ? BREAKING NEWS | ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭಮನ್ ಗಿಲ್ ಆಯ್ಕೆ
ಮುಂಬೈ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಅಷ್ಟೇ ಅಲ್ಲ ವಿಶ್ವ ದರ್ಜೆಯ ಬೌಲರ್‌ಗಳು ಸಹ ಇದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಸ್ಪಿನ್ ಬೌಲಿಂಗ್‌ನಲ್ಲಿ ಮಿಚೆಲ್ ಸ್ಯಾಂಟ್ನರ್, ಕರಣ್ ಶರ್ಮಾ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು.
ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ವಿಭಾಗ ಕೂಡ ಬಲಾಢ್ಯವಾಗಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಯಿ ಸುದರ್ಶನ್ ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬೌಲರ್. ಇನ್ನು ಇವರ ಹಿಂದೆ ನಾಯಕ ಶುಭಮನ್ ಗಿಲ್ ಇದ್ದಾರೆ. ಜೋಸ್ ಬಟ್ಲರ್ ಸ್ಥಾನವನ್ನು ಕುಸಾಲ್ ಮೆಂಡೀಸ್ ತುಂಬಲಿದ್ದಾರೆ. ಶೆರ್ಫೇನ್ ರುದರ್ಫೋರ್ಡ್, ಶಾರೂಖ್ ಖಾನ್, ರಾಹುಲ್ ತೆವಾಟಿಯಾ ಸಮಯೋಚಿತ ಆಟವನ್ನು ಆಡಿದರೆ ಗೆಲುವಿನ ಕನಸು ನನಸಾಗುತ್ತದೆ.
ಗುಜರಾತ್ ಬೌಲಿಂಗ್ ವಿಭಾಗಕ್ಕೆ ಬಂದರೆ, ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ಡಾಟ್ ಬೌಲ್‌ಗಳನ್ನು ಹಾಕಿದ ಬೌಲರ್. ಅರ್ಷದ್ ಖಾನ್ ಕೂಡ ಉತ್ತಮ ಬೌಲರ್. ಪವರ್ ಪ್ಲೇ ಮುಕ್ತಾಯವಾಗುತ್ತಿದ್ದಂತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಕಾಣಿಸಿಕೊಳ್ಳಬಲ್ಲರು. ಇವರು ಲೀಗ್‌ನಲ್ಲಿ ಸದ್ಯ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್. ಹಾಗೆಯೇ ವಿಶ್ವದ ಖ್ಯಾತ ಸ್ಪಿನ್ ಬೌಲರ್ ರಶೀದ್ ಖಾನ್, ಸಾಯಿ ಕಿಶೋರ್ ಕೂಡ ಜಾದು ನಡೆಸುವ ಬೌಲರ್‌ಗಳಾಗಿದ್ದಾರೆ.
ಪಂದ್ಯವಾಡುವ ಉಭಯ ತಂಡಗಳ ಸಂಭಾವ್ಯ 11ರ ಬಳಗ:
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ಕುಸಲ್ ಮೆಂಡಿಸ್, ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್ , ಜೆರಾಲ್ಡ್ ಕೋಟ್ಜಿ, ಅರ್ಷದ್ ಖಾನ್, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ , ಜಾನಿ ಬೈರ್‌ಸ್ಟೋ, ಸೂರ್ಯಕುಮಾರ್ ಯಾದವ್, ಚರಿತ್ ಅಸಲಂಕಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ) , ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್ , ಜಸ್ಪ್ರೀತ್ ಬುಮ್ರಾ
ಪಂದ್ಯದ ಸಮಯ: ಸಂಜೆ 7.30
ನೇರ ಪ್ರಸಾರ: ಜಿಯೋ ಹಾಟ್ ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್