ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಲಿವಿಂಗ್ ಸ್ಟನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್‌ಗಳ ಸಾಧಾರಣ ಮೊತ್ತದ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶುಭಮನ್ ಗಿಲ್ ನೇತೃತ್ವದ ಗುಜರಾತ್ ತಂಡ, 17.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಗುಜರಾತ್ ಪರ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್, 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸ್‌ನ ನೆರವಿನಿಂದ 73 ರನ್ ಗಳಿಸುವ ಮೂಲಕ ಮಿಂಚಿದರು. ಉಳಿದಂತೆ ಸಾಯಿ ಸುದರ್ಶನ್ 49 ರನ್, ರುದರ್‌ಫೋರ್ಡ್ 30 ಹಾಗೂ ನಾಯಕ ಗಿಲ್ 14 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿಯ ಬ್ಯಾಟರ್‌ಗಳು, ಆರ್‌ಸಿಬಿಯ ಮಾಜಿ ಆಟಗಾರ ಮೊಹಮ್ಮದ್ ಸಿರಾಜ್ ಅವರ ಕರಾರುವಾಕ್ಕಾದ ಬೌಲಿಂಗ್‌ನಲ್ಲಿ ರನ್ ಗಳಿಸಲು ಪರದಾಡಿ, ವಿಕೆಟ್ ಒಪ್ಪಿಸಿದ್ದರು. ಸಿರಾಜ್ ಕೇವಲ 19 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಸಿರಾಜ್ ಪಂದ್ಯದ ರೂವಾರಿ.