ಎಲ್ಲ ಫ್ರಾಂಚೈಸಿಗಳಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಈ ಬಾರಿ ಅಳೆದು ತೂಗಿ ಹಲವು ಸ್ಟಾರ್ ಕ್ರಿಕೆಟಿಗರನ್ನು ಖರೀದಿಸಿದೆ.
ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಇಂಗ್ಲೆಂಡ್ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ಈ ಬಾರಿ ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಮಧ್ಯಮ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರನಾಗಿರುವ ಲಿವಿಂಗ್ಸ್ಟೋನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಬೌಲಿಂಗ್ನಲ್ಲೂ ನೆರವಾಗಲಿದ್ದಾರೆ. ತಮ್ಮ ಬ್ಯಾಟಿಂಗ್ ಝಲಕ್ ತೋರಿಸಿ ಲಿಯಾಮ್ ಲಿವಿಂಗ್ಸ್ಟೋನ್ ಅಬ್ಬರಿಸಿರುವುದು ವಿಶೇಷ.
ಲಿಯಾಮ್ ಲಿವಿಂಗ್ಸ್ಟೋನ್ ಅಬುಧಾಬಿ ಟಿ10 ಲೀಗ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಟೂರ್ನಿಯ 18ನೇ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಪರ ಕಣಕ್ಕಿಳಿದ ಲಿಯಾಮ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಬ್ಬರಿಸಿದ್ದ ಹೆಗ್ಗಳಿಕೆ ಇವರಿಗಿದೆ.
ಶೇಖ್ ಝಾಯದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಬುಲ್ಸ್ ಹಾಗೂ ಬಾಂಗ್ಲಾ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬುಲ್ಸ್ ತಂಡವು 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 123 ರನ್ ಕಲೆಹಾಕಿತ್ತು.
ಈ ಸುದ್ದಿ ಓದಿದ್ದೀರಾ? IPL-2025 | ಇವರೇ ನೋಡಿ ‘ಆರ್‌ಸಿಬಿ’ಯಲ್ಲಿ ಅಬ್ಬರಿಸುವ ಆಟಗಾರರು, ಪೂರ್ಣ ಪಟ್ಟಿ ಇಲ್ಲಿದೆ
60 ಎಸೆತಗಳಲ್ಲಿ 124 ರನ್ಗಳ ಗುರಿ ಪಡೆದ ಬಾಂಗ್ಲಾ ಟೈಗರ್ಸ್ ಪರ ಲಿಯಾಮ್ ಲಿವಿಂಗ್ಸ್ಟೋನ್ ಅಬ್ಬರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿಯಾಮ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳ ಸುರಿಮಳೆಗೈದಿದ್ದರು. ಅಲ್ಲದೆ ಕೇವಲ 15 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 50 ರನ್ ಬಾರಿಸಿ 9.4 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದ್ದರು.
ಈ ಬಾರಿಯ ಮೆಗಾ ಹರಾಜಿನಲ್ಲಿ ಇಂಗ್ಲೆಡ್ ದಾಂಡಿಗ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಆರ್‌ಸಿಬಿ 8.75 ಕೋಟಿ ರೂ. ಗೆ ಖರೀದಿಸಿದೆ. ಯಾವ ಕ್ಷಣದಲ್ಲದರೂ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಲಿಯಾಮ್ ಲಿವಿಂಗ್ಸ್ಟೋನ್ ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್ ಅವರಂತೆ ಆರ್‌ಸಿಬಿ ಪ್ರೇಮಿಗಳ ಮನಸ್ಸು ಗೆಲ್ಲುವ ಆಟಗಾರರಾಗುತ್ತಾರಾ ಎಂಬುದು ಕಾದುನೋಡಬೇಕು.