- ‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಿಗ್ಗಜ ಹೀತ್ ಸ್ಟ್ರೀಕ್ ನಿಧನ’ ಎಂದು ಸುದ್ದಿ
- ‘ಥರ್ಡ್ ಅಂಪೈರ್ ಅವರನ್ನು ಮರಳಿ ಕರೆತಂದಿದ್ದಾರೆ’ ಎಂದ ಗೆಳೆಯ ಹೆನ್ರಿ ಒಲಾಂಗ
ತನ್ನ ನಿಧನ ವದಂತಿಗೆ ಸ್ಪಷ್ಟೀಕರಣ ನೀಡಿರುವ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್, ‘ನಾನಿನ್ನೂ ಜೀವಂತವಿದ್ದೇನೆ. ದಯವಿಟ್ಟು ಈ ಕೂಡಲೇ ರನೌಟ್ ತೀರ್ಪನ್ನು ಹಿಂಪಡೆಯಿರಿ’ ಎಂದು ತಿಳಿಸಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ ದಿಗ್ಗಜ ಹೀತ್ ಸ್ಟ್ರೀಕ್ (49) ಕೊನೆಯುಸಿರೆಳೆದಿದ್ದಾರೆ. ಮಾಜಿ ಆಲ್‌ರೌಂಡರ್ ಕ್ಯಾನ್ಸರ್‌ನಿಂದ ಬಳಲಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸುವ ಪ್ರಯತ್ನ ಮಾಡಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ ಎಂದು ಹೀತ್ ಸ್ಟ್ರೀಕ್ ಅವರ ಮಾಜಿ ಸಹೋದ್ಯೋಗಿಗಳು ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಾಗಿತ್ತು. ಇದು ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲೂ ಬಿತ್ತರಗೊಂಡಿತ್ತು.
ಈ ಬಗ್ಗೆ ‘ಮಿಡ್-ಡೇ’ ಮಾಧ್ಯಮದೊಂದಿಗೆ ಮಾತನಾಡಿರುವ ಹೀತ್ ಸ್ಟ್ರೀಕ್, ‘ಇದು ಸಂಪೂರ್ಣ ಸುಳ್ಳು ವದಂತಿ. ನಾನು ಜೀವಂತವಾಗಿದ್ದೇನೆ ಮತ್ತು ಚೆನ್ನಾಗಿಯೇ ಇದ್ದೇನೆ. ಸಾಮಾಜಿಕ ಮಾಧ್ಯಮ ಇರುವ ಈ ಯುಗದಲ್ಲಿಯೂ ಕೂಡ ಇಂತಹ ಸುದ್ದಿಗಳನ್ನು ದೃಢಪಡಿಸದೆ ಹಂಚಿರುವುದು ನಿಜಕ್ಕೂ ಬೇಸರ ತರಿಸಿದೆ. ಇದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ಇದನ್ನು ಹರಡಿದವರು ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಹೀತ್‌ಸ್ಟ್ರೀಕ್ ನಿಧನ ಹೊಂದಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಅವರ ಮಾಜಿ ಸಹೋದ್ಯೋಗಿ ಹಾಗೂ ಆಪ್ತ ಗೆಳೆಯ ಹೆನ್ರಿ ಒಲಾಂಗ ಕೂಡ ಹಂಚಿಕೊಂಡಿದ್ದರು. ಬಳಿಕ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.
‘ಅವರು ನಿಧನರಾಗಿಲ್ಲ’ ಎಂದು ದೃಢವಾದ ನಂತರ ಮೊದಲ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಹೆನ್ರಿ ಒಲಾಂಗ, ಹೀತ್ ಸ್ಟ್ರೀಕ್ ಜೊತೆಗಿನ ವಾಟ್ಸ್‌ಆಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.
“ಹೀತ್ ಸ್ಟ್ರೀಕ್ ಸತ್ತಿದ್ದಾರೆ ಎಂಬ ಸುದ್ದಿ ತಪ್ಪಾಗಿ ಹಬ್ಬಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಇದರ ವೈಭವೀಕರಣವೂ ನಡೆದಿದೆ. ಅವರಿಂದಲೇ ಈಗ ಮಾಹಿತಿ ಲಭ್ಯವಾಗಿದ್ದು, ಥರ್ಡ್ ಅಂಪೈರ್ ಅವರನ್ನು ಮರಳಿ ಕರೆತಂದಿದ್ದಾರೆ. ಪ್ರೀತಿಯ ಜನರೇ, ಅವರಿನ್ನೂ ಬದುಕಿದ್ದಾರೆ,” ಎಂದು ಹೆನ್ರಿ ಒಲಾಂಗ ತಿಳಿಸಿದ್ದಾರೆ.