ಬಾಕ್ಸಿಂಗ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಅವರು ಬಾಕ್ಸಿಂಗ್ ಕ್ಷೇತ್ರಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹರಿದಾಡಿರುವ ಹಿನ್ನೆಲೆಯಲ್ಲಿ ಸ್ವತಃ ಸ್ಪಷ್ಟೀಕರಣ ನೀಡಿರುವ ಅವರು, “ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ” ಎಂದು ತಿಳಿಸಿದ್ದಾರೆ.
41 ವರ್ಷ ವಯಸ್ಸಿನ ಮೇರಿ ಕೋಮ್ ಅವರು ಬಾಕ್ಸಿಂಗ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ದೇಶದ ಹಲವು ಸುದ್ದಿ ಮಾಧ್ಯಮಗಳು ನಿನ್ನೆ(ಜ.24)ರ ಸಂಜೆ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.
“ನಾನು ನಿವೃತ್ತಿಯನ್ನು ಘೋಷಿಸಲು ಬಯಸಿದಾಗ ನಾನೇ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ನಿವೃತ್ತಿ ಘೋಷಿಸುತ್ತೇನೆ. ಕೆಲವು ಮಾಧ್ಯಮಗಳಲ್ಲಿ ನಾನು ನಿವೃತ್ತಿ ಘೋಷಿಸಿರುವುದಾಗಿ ವರದಿಯಾಗಿದೆ. ಅದು ಸುಳ್ಳು. ನಾನು ಜನವರಿ 24ರಂದು ದಿಬ್ರುಗಢ್‌ನ ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ” ಎಂದು ತಿಳಿಸಿದ್ದಾರೆ.
Boxing champion Mary Kom says, “I haven’t announced retirement yet and I have been misquoted. I will personally come in front of media whenever I want to announce it. I have gone through some media reports stating that I have announced retirement and this is not true. I was… pic.twitter.com/VxAcFsq44v
— ANI (@ANI) January 25, 2024
“ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ, ಕ್ರೀಡೆಗಳಲ್ಲಿ ಚಿಕ್ಕಂದಿನಿಂದಲೇ ಭಾಗವಹಿಸಿ ಎಂದು ಪ್ರೇರೇಪಿಸುತ್ತಿದ್ದೆ. ಇದೇ ವೇಳೆ ನನಗೆ ಇನ್ನೂ ಕ್ರೀಡೆಯಲ್ಲಿ ಸಾಧನೆ ಮಾಡುವ ಮನಸ್ಸಿದೆ. ಹೋರಾಡಿ ಗೆಲ್ಲುವ ಹಸಿವು ನನ್ನಲ್ಲಿ ಈಗಲೂ ಇದೆ. ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ಒಲಿಂಪಿಕ್ಸ್‌ನಲ್ಲಿನ ವಯಸ್ಸಿನ ಮಿತಿಯು ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದಷ್ಟೇ ಹೇಳಿದ್ದೇನೆ. ಸದ್ಯ ನಾನು ಬಾಕ್ಸಿಂಗ್‌ನಲ್ಲಿ ನನ್ನ ಫಿಟ್ನೆಸ್ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ನಾನು ಬಾಕ್ಸಿಂಗ್‌ಗೆ ನಿವೃತ್ತಿಯನ್ನು ಘೋಷಿಸುವಾಗ ಎಲ್ಲರಿಗೂ ತಿಳಿಸುತ್ತೇನೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಮೇರಿ ಕೋಮ್ ಅವರು 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 2012ರ ಒಲಿಂಪಿಕ್ಸ್‌ನಲ್ಲೂ ಪದಕ ಗೆದ್ದಿದ್ದಾರೆ. ಮೇರಿ ಕೋಮ್ 41 ವರ್ಷ ವಯಸ್ಸಿನವರಾಗಿದ್ದು, ಹೀಗಾಗಿಯೇ ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಹಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದವು.
ಮೇರಿ ಕೋಮ್ ಬಾಕ್ಸಿಂಗ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 6 ಬಾರಿ ಚಾಂಪಿಯನ್ ಪಟ್ಟ ಗೆದ್ದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಮಾತ್ರವಲ್ಲದೇ, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಮೇರಿ ಕೋಮ್ ಆಗಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2006 ರಲ್ಲಿ, ಮೇರಿ ಕೋಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 2009 ರಲ್ಲಿ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಸಹ ನೀಡಲಾಗಿತ್ತು.
ಮೇರಿ ಕೋಮ್ ನಿರಂತರವಾಗಿ ಏಳು ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆ ಕೂಡ ಹೊಂದಿದ್ದಾರೆ. 2018ರಲ್ಲಿ, ಮಣಿಪುರ ಸರ್ಕಾರವು ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಮೀಥೋಯ್ ಲಿಮಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪದ್ಮಭೂಷಣ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ಮತ್ತು ಇತರ ಅನೇಕ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಮೇರಿ ಕೋಮ್ ಅವರ ಜೀವನವನ್ನು ಆಧರಿಸಿದ ಹಿಂದಿ ಬಯೋಪಿಕ್ 2014ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮೇರಿ ಕೋಮ್ ಪಾತ್ರವನ್ನು ನಿರ್ವಹಿಸಿದ್ದಾರೆ.