ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಶ್ರೀಲಂಕಾ ಪಡೆ ಬೌಲರ್‌ಗಳ ಸಾಂಘಿಕ ಪ್ರಯತ್ನದಿಂದ ಸುಲಭವಾಗಿ ಬಗ್ಗು ಬಡಿದಿದೆ.
ಇಂಗ್ಲೆಂಡ್ ನೀಡಿದ ಕೇವಲ 157 ರನ್‌ಗಳನ್ನು ಬೆನ್ನಟ್ಟಿದ ಕುಶಾಲ್ ಮೆಂಡೀಸ್ ನೇತೃತ್ವದ ಶ್ರೀಲಂಕಾ ತಂಡ 25.4 ಓವರ್‌ಗಳಲ್ಲಿ ಗುರಿ ಸಾಧಿಸಿ 8 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಕರಾರುವಾಕ್ಕಾದ ಬೌಲಿಂಗ್ ಮಾಡಿದ ಲಹಿರು ಕುಮಾರ 35/3, ಏಂಜಲೋ ಮ್ಯಾಥ್ಯೂಸ್ 14/2 ಹಾಗೂ ಕಸುನ್ ರಂಜಿತಾ 36/2 ವಿಕೆಟ್ ಪಡೆದು ಆಂಗ್ಲ ಪಡೆಯನ್ನು 156 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರು.
ಈ ಮೊತ್ತವನ್ನು ಬೆನ್ನಟ್ಟಿದ ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ (77) ಹಾಗೂ ಸದೀರ ಸಮರವಿಕ್ರಮ (65) 137 ರನ್‌ಗಳ ಮುರಿಯದ ಮೂರನೇ ಜೊತೆಯಾಟದಿಂದ ಸುಲಭವಾಗಿ ಗೆಲುವು ಸಾಧಿಸಿದರು.
ಈ ಹ್ಯಾಟ್ರಿಕ್ ಸೋಲಿನೊಂದಿಗೆ ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರ ಹೋದಂತಾಗಿದೆ. ಇನ್ನುಳಿದ 4 ಪಂದ್ಯಗಳಲ್ಲಿ ಜಯಗಳಿಸಿದರೂ ಸೆಮಿಫೈನಲ್ ಪ್ರವೇಶಿಸಲು ಕಷ್ಟಸಾಧ್ಯವಾಗಲಿದೆ. ವಿಶ್ವಕಪ್ ಟೂರ್ನಿಯಲ್ಲಿ 2ನೇ ಗೆಲುವು ಪಡೆದಿರುವ ಶ್ರೀಲಂಕಾ ಅಂತಿಮ ನಾಲ್ಕರ ಘಟ್ಟವನ್ನು ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಭಾರತದ ಮಾಜಿ ಕ್ರಿಕೆಟಿಗ, ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಪಿಚ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆ ಹುಸಿಯಾಯಿತು. ಶ್ರೀಲಂಕಾದ ಮಾರಕ ಬೌಲಿಂಗ್ ದಾಳಿಗೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು.
Sri Lankan bowlers on fire! 🔥🔥🔥
England's batters held to 156. Now, it's our turn to roar! 🏏🦁#LankanLions #SLvENG #CWC23 pic.twitter.com/dYG2EBelBI— Sri Lanka Cricket 🇱🇰 (@OfficialSLC) October 26, 2023
ಆರಂಭದಲ್ಲಿ ಡೇವಿಡ್ ಮಲಾನ್ ಮತ್ತು ಜಾನಿ ಬೈರ್‌ಸ್ಟೋ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಆದರೆ ತಂಡದ ಮೊತ್ತ 6.3 ಓವರ್‌ಗಳಲ್ಲಿ 45 ರನ್ ಆಗಿದ್ದಾಗ ಮಲಾನ್, 25 ಎಸೆತಗಳಲ್ಲಿ 6 ಬೌಂಡರಿ ಸಹಿತ 28 ರನ್ ಸಿಡಿಸಿ ಏಂಜಲೋ ಮ್ಯಾಥ್ಯೂಸ್ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು. ಆ ಮೂಲಕ ಏಕದಿನ ವಿಶ್ವಕಪ್‌ಗೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಮ್ಯಾಥ್ಯೂಸ್ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಕಾರಣರಾದರು.
ವಿಕೆಟ್ ಪಡೆದ ನಂತರದಲ್ಲಿ ಮ್ಯಾಥ್ಯೂಸ್, ಜೋ ರೂಟ್ ಅವರನ್ನು (3) ರನೌಟ್ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ 30 ರನ್ ಗಳಿಸಿದ್ದ ಬೈರ್ ಸ್ಟೋಗೆ ಕಸುನ್ ರಜಿತ ಆಘಾತ ನೀಡಿದರು. ಮತ್ತೊಂದೆಡೆ ನಾಯಕ ಜೋಸ್ ಬಟ್ಲರ್ (8), ಲಿಯಾಮ್ ಲಿವಿಂಗ್ ಸ್ಟೋನ್ (1), ಮೊಯಿನ್ ಅಲಿ (15) ಕೂಡ ನಿರಾಸೆ ಮೂಡಿಸಿದರು.
Sri Lanka's bowling prowess on full display! 💪 Check out these impressive figures. #SLvENG #LankanLions #CWC23 pic.twitter.com/IKktDHZGHi
— Sri Lanka Cricket 🇱🇰 (@OfficialSLC) October 26, 2023
ವಿಕೆಟ್ ಬೀಳುತ್ತಿರುವ ನಡುವೆಯೂ ಬೆನ್ ಸ್ಟೋಕ್ಸ್ ತಂಡಕ್ಕೆ ಆಸರೆಯಾದರು. ಆದರೆ ಸ್ಟೋಕ್ಸ್‌ಗೆ ಯಾರೊಬ್ಬರು ಜೊತೆ ನೀಡಲಿಲ್ಲ. ಇದರ ಮಧ್ಯೆ ಬಿರುಸಿನ ಆಟಕ್ಕೆ ಮುಂದಾದ ಸ್ಟೋಕ್ಸ್, 73 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರಿಸ್ ವೋಕ್ಸ್ (0), ಆದಿಲ್ ರಶೀದ್ (2), ಮಾರ್ಕ್ ವುಡ್ (5) ಕೊನೆಯಲ್ಲಿ ಬೇಗನೆ ವಿಕೆಟ್ ಒಪ್ಪಿಸಿದರು. ಡೇವಿಡ್ ವಿಲ್ಲಿ ಅಜೇಯ 14 ರನ್ ಗಳಿಸಿದರು.
ಅಂತಿಮವಾಗಿ ಇಂಗ್ಲೆಂಡ್ 33.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು.