ಭಾರತದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಮತ್ತು ವೇಗದ ಬೌಲರ್ ಮೊಹಮದ್ ಸಿರಾಜ್ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯ ಪ್ರಕಾರ, ಶುಭಮನ್ ಗಿಲ್ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದರೆ, ಮೊಹಮದ್ ಸಿರಾಜ್ ನಂಬರ್ ಒನ್ ಬೌಲರ್ ಆಗಿದ್ದಾರೆ.
ಶುಭ್‌ಮನ್ ಗಿಲ್ 830 ಪಾಯಿಂಟ್ ಗಳಿಸಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದುವರೆಗೆ ನಂಬರ್ ಒನ್ ಸ್ಥಾನದಲ್ಲಿದ್ದ ಪಾಕಿಸ್ತಾನದ ನಾಯಕ ಬಾಬರ್ ಆಜಂ, 824 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಇದುವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (771) ಮೂರನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (770) ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (743) ಮತ್ತು ಭಾರತದ ರೋಹಿತ್ ಶರ್ಮಾ (739) ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದಿದ್ದಾರೆ.
ಭಾರತದ ವೇಗದ ಬೌಲರ್ ಮೊಹಮದ್ ಸಿರಾಜ್ 709 ಪಾಯಿಂಟ್‌ಗಳೊಂದಿಗೆ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 694 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರೆ, ಆಸ್ಟ್ರೇಲಿಯಾದ ಆಡಂ ಜಂಪಾ 662 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಭಾರತದ ಕುಲ್‌ದೀಪ್ ಯಾದವ್ (661) ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ (658) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದ್ದಾರೆ.
ಐಸಿಸಿ ವಿಶ್ವಕಪ್ 2003ರಲ್ಲಿ ಭಾರತ ತಂಡವು ಪ್ರಚಂಡ ಪ್ರದರ್ಶನ ತೋರುತ್ತಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗ ಐಸಿಸಿ ರ‍್ಯಾಂಕಿಂಗ್‌ನಲ್ಲಿಯೂ ಭಾರತದ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳೇ ಅಗ್ರಸ್ಥಾನದಲ್ಲಿರುವುದು ವಿಶೇಷವಾಗಿದೆ.