ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಎನ್ನುವ ರೀತಿಯಲ್ಲಿ ಸೋಲುಂಡಿದೆ. ಈ ನಡುವೆ, ಸೋಮವಾರ ನಡೆದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಬಾಂಗ್ಲಾವನ್ನು ಸೋಲಿಸಿ ನ್ಯೂಜಿಲೆಂಡ್ ಗೆದ್ದಿದೆ. ಪರಿಣಾಮ, ಅಂಕ ಪಟ್ಟಿಯಲ್ಲಿ ಪಾಕ್ ಕೊನೆ ಸ್ಥಾನಕ್ಕೆ ಕುಸಿದಿದ್ದು, ಟೂರ್ನಿಯಿಂದಲೇ ಹೊರಗುಳಿದಿದೆ.
ಸೋಮವಾರದ ಬಾಂಗ್ಲಾ-ನ್ಯೂಜಿಲೆಂಡ್ ನಡುವಿನ ಪಂದ್ಯವು ಬಾಂಗ್ಲಾ ಸೋಲಿಗೆ ಮಾತ್ರವಲ್ಲ, ಪಾಕ್‌ಗೆ ಶವಪೆಟ್ಟಿಗೆಯೂ ಆಗಿತ್ತು. ಟೂರ್ನಿಯ ಆತಿಥೇಯ ರಾಷ್ಟ್ರವಾದ ಪಾಕಿಸ್ತಾನವನ್ನೇ ಟೂರ್ನಿಯಿಂದ ಹೊರಗಿಟ್ಟಿತು. ಪಂದ್ಯಾವಳಿಯಲ್ಲಿ ಪಾಕ್ ಪತನಕ್ಕೆ ನ್ಯೂಜಿಲೆಂಡ್ ಗೆಲುವು ಮಾತ್ರ ಕಾರಣವಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದೇ ಕಾರಣ.
ಪಾಕ್ ತಂಡ ಕಳೆದ 10 ವರ್ಷಗಳಿಂದ ನಿರಂತರವಾಗಿ ಹಿನ್ನೆಡೆ ಅನುಭವಿಸುತ್ತಲೇ ಇದೆ. ಸೋಲುತ್ತಲೇ ಇದೆ. ಪಾಕ್ ತಂಡವು ಹಲವಾರು ಪಂದ್ಯಗಳಲ್ಲಿ ಮೊದಲ 35 ಓವರ್‌ಗಳಲ್ಲಿ ನೀರಸ ಪ್ರದರ್ಶನ ನೀಡುವುದು ಮತ್ತು ಕಡೆಯ 15 ಓವರ್‌ಗಳಲ್ಲಿ ಹೆಚ್ಚಿನ ರನ್ ಕಲೆಹಾಕಲು ಪ್ರಯತ್ನಿಸುವುದನ್ನು ಕರಗತ ಮಾಡಿಕೊಂಡಿದೆ. ಭಾನುವಾರದ ಪಂದ್ಯದಲ್ಲೂ ಅದನ್ನೇ ಮಾಡಿದೆ. ಆದಾಗ್ಯೂ, ಭಾರತ ಸೇರಿದಂತೆ ಹಲವು ತಂಡಗಳು ಮೊದಲು 35 ಓವರ್‌ಗಳಲ್ಲಿ ಹೆಚ್ಚಿನ ರನ್ ಗಳಿಸಲು ಯತ್ನಿಸುತ್ತಿವೆ. ಅಂತಹ ಪ್ರಯತ್ನದಲ್ಲೇ 42 ಓವರ್‌ಗಳಲ್ಲೇ ಪಾಕ್ ವಿರುದ್ಧ ಭಾರತ ಭರ್ಜರಿ ಗೆಲುವನ್ನೂ ಕಂಡಿದೆ.
ಜೊತೆಗೆ, ಪಾಕಿಸ್ತಾನವು ಡಾಟ್ ಬಾಲ್‌ಗಳಲ್ಲಿ ಅಗ್ರ ಸ್ಥಾನವನ್ನೂ ಪಡೆದುಕೊಂಡಿದೆ. 50 ಓವರ್‌ಗಳ ಪಂದ್ಯದಲ್ಲಿ ತಂಡದ ಸೋಲು-ಗೆಲುವಿಗೆ ಡಾಟ್ ಬಾಲ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಪಾಕ್ ತಂಡವು ಈ ವರ್ಷದ ಆರಂಭದಿಂದಲೂ ಆಡಿರುವ ಏಕದಿನ ಪಂದ್ಯಗಳಲ್ಲಿ ಸರಾಸರಿ 145 ಡಾನ್ ಬಾಲ್‌ಗಳನ್ನು ಹೊಂದಿದೆ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟೂರ್ನಿಯಲ್ಲಿಯೂ ಎರಡು ಪಂದ್ಯಗಳನ್ನು ಆಡಿರುವ ಪಾಕ್ ತಂಡದ ಬ್ಯಾಟರ್‌ಗಳು ಭಾರೀ ಡಾಟ್ ಬಾಲ್‌ಗಳೊಂದಿಗೆ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ 161 ಮತ್ತು ಭಾರತದ ವಿರುದ್ಧ ಪಂದ್ಯದಲ್ಲಿ 147 ಡಾಟ್‌ಗಳನ್ನು ಬ್ಯಾಟರ್‌ಗಳು ಬಿಟ್ಟಿದ್ದಾರೆ.
ಕೆಲವು ತಂಡಗಳ ಬ್ಯಾಟರ್‌ಗಳು ತಾವು ಬಿಟ್ಟುಬಿಡುವ ಡಾಟ್ ಬಾಲ್‌ಗಳನ್ನು ಬೌಂಡರಿ ಅಥವಾ ಸಿಕ್ಸರ್‌ಗಳೊಂದಿಗೆ ಸರಿದೂಗಿಸುತ್ತಾರೆ. ಆದರೆ, ಪಾಕ್ ತಂಡಕ್ಕೆ ಅದನ್ನೂ ಮಾಡಲು ಸಾಧ್ಯವಾಗಲಿಲ್ಲ. 2025ರಲ್ಲಿ, ಪಾಕ್ ತಂಡದ ಬೌಂಡರಿಗಳು 46.96% ಇವೆ. ಇದು ಬಾಂಗ್ಲಾದೇಶದ ಶೇಕಡಾವಾರುಗಿಂತ (40.08%) ಉತ್ತಮವಾಗಿದೆ. ಆದಾಗ್ಯೂ, ಪಾಕ್ ವಿರುದ್ಧ ಆಡಿದ ಭಾರತವು ಪ್ರತಿ ಪಂದ್ಯದಲ್ಲಿ ಸರಾಸರಿ 125 ಡಾಟ್ ಬಾಲ್‌ಗಳನ್ನು ಆಡಿದೆ. ಆದರೆ, ಅದರ ಬೌಂಡರಿಗಳ ಪ್ರಮಾಣವು 55.1% ಇದೆ. ಇದು, ಡಾಟ್ ಬಾಲ್‌ಗಳಿಂದ ಕಳೆದುಕೊಳ್ಳಬಹುದಾದ ರನ್‌ಗಳಲ್ಲಿ ಭಾಗಶಃ ರನ್‌ಗಳನ್ನು ಕಲೆ ಹಾಕುವಲ್ಲಿ ಸಫಲತೆಯನ್ನು ಸೂಚಿಸುತ್ತದೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೊದಲ 15 ಓವರ್‌ಗಳಲ್ಲಿ 61 ಡಾಟ್ ಬಾಲ್‌ಗಳನ್ನು ಆಡಿತು. ಇದನ್ನು, ಭಾರತದ ಅತ್ಯುತ್ತಮ ಬೌಲಿಂಗ್ ಎಂದು ಕ್ರೀಡಾಭಿಮಾನಿಗಳು ಬಣ್ಣಿಸಿದರು.
”ನಾವು ಪಿಚ್‌ನಲ್ಲಿ ಸುಮಾರು 270 – 280 ರನ್‌ಗಳನ್ನು ಕಲೆ ಹಾಕಿದರೆ, ಗೆಲ್ಲಲು ಸಾಕಾಗಬಹುದೆಂದು ಚರ್ಚಿಸಿದ್ದೆವು. ಅಂತೆಯೇ, ನಾವು 280 ರನ್ ಗಳಿಸಿದ್ದರೆ ಭಾನುವಾರದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ ನಾನು (ರಿಜ್ವಾನ್) ಮತ್ತು ಸೌದ್ ಉತ್ತಮ ಜೊತೆ ಆಟಕ್ಕೆ ಪ್ರಯತ್ನಿಸಿದೆವು. ಅದಕ್ಕಾಗಿ, ಸಾಕಷ್ಟು ಸಮಯ ತೆಗೆದುಕೊಂಡೆವು. ಆದರೆ, ನಾವಿಬ್ಬರು ಔಟ್ ಆದ ಬಳಿಕ, ಮಧ್ಯಮ ಕ್ರಮಾಂಕದ ಆಟಗಾರರು ಒತ್ತಡ ನಿಭಾಯಿಸಲು ಸಾಧ್ಯವಾಗಲಿಲ್ಲ” ಎಂದು ಪಾಕ್ ನಾಯಕ ರಿಜ್ವಾನ್ ಹೇಳಿದ್ದಾರೆ.
“ಭಾರತೀಯ ತಂಡವು ನಮಗಿಂತ ಹೆಚ್ಚಿನ ಪ್ರಯತ್ನ ಮಾಡಿದೆ. ಬಹುಶಃ ಅವರು ನಮಗಿಂತ ಹೆಚ್ಚು ಧೈರ್ಯಶಾಲಿಗಳಾಗಿರಬಹುದು. ಅದಕ್ಕಾಗಿಯೇ ಅವರು ಈ ಫಲಿತಾಂಶವನ್ನು ಪಡೆದರು” ಎಂದೂ ಹೇಳಿದ್ದಾರೆ.
ಬೇರೆ ಯಾವುದೇ ತಂಡಕ್ಕೆ, ಯಾವುದೇ ದಿನದಂದು ಎದುರಾಳಿ ತಂಡವು ಉತ್ತಮ ತಂಡವಾಗಿ ಕಾಣಬಹುದು. ಆದರೆ ಪಾಕಿಸ್ತಾನದ ವಿಚಾರದಲ್ಲಿ ಸ್ಪಷ್ಟವಾದ ಮಾದರಿಯಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ತಂಡವೇ ಆರಂಭಿಕ ನಿರ್ಗಮನ ಕಂಡಿರುವುದು ಮುಂದಿನ ದಿನಗಳಲ್ಲಿ ಆತಿಥೇಯರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಪಾಕ್ ತಂಡವು ವಿಶ್ವದ ಅಗ್ರ ತಂಡಗಳಲ್ಲಿ ಒಂದಾಗಲು ಮತ್ತಷ್ಟು ಕಸರತ್ತು ನಡೆಸಬೇಕಿದೆ. ವಿಶೇಷವಾಗಿ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೂ ಮೊದಲು, ಪಾಕಿಸ್ತಾನ ತಂಡ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಬೇಕಿದೆ. ಉತ್ತಮ ತಯಾರಿ ನಡೆಸಬೇಕಿದೆ. 50 ಓವರ್‌ಗಳನ್ನು ಎದುರಿಸುವಲ್ಲಿ ಕಾರ್ಯ ವಿಧಾನವನ್ನು ಅವಲೋಕನ ಮಾಡಿಕೊಳ್ಳಬೇಕಿದೆ.