ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಾವಳಿಗಳು ನಡೆಯುತ್ತಿದ್ದು, ಭಾರತ ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ದುಬೈನಲ್ಲಿ ಭಾನುವಾರ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಭಾರತದ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು, 3ನೇ ಕ್ರಮಾಂಕದಲ್ಲಿ ಸ್ಕ್ರೀಜ್‌ಗೆ ಇಳಿದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೇವಲ 11 ರನ್‌ಗಳಿಗೆ ಕ್ಯಾಚಿತ್ತು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ. ಆದಾಗ್ಯೂ, ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ 300 ಪಂದ್ಯಗಳನ್ನು ಆಡುವ ಮೂಲಕ ಹೊಸ ದಾಖಲೆಗೆ ಸೇರ್ಪಡೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ಕೊಹ್ಲಿ ಅವರ 300ನೇ ಪಂದ್ಯವಾಗಿದೆ. ಜಗತ್ತಿನ ನಾನಾ ಕ್ರಿಕೆಟ್ ತಂಡಗಳ ಪೈಕಿ ಈವರೆಗೆ ಕೇವಲ 20 ಮಂದಿ ಮಾತ್ರವೇ 300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿಸಿದ್ದಾರೆ. ಇದೀಗ, 300 ಪಂದ್ಯಗಳಲ್ಲಿ ಆಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 21ನೆಯವರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಮಾತ್ರವಲ್ಲದೆ, ಭಾರತ ತಂಡದಲ್ಲಿ 300ಕ್ಕೂ ಅಧಿಕ ಏಕದಿನ ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಕೊಹ್ಲಿ 7ನೇ ಆಟಗಾರನಾಗಿದ್ದಾರೆ. ಇದೂವರೆಗೆ, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ ಹಾಗೂ ಯುವರಾಜ್ ಸಿಂಗ್ ಮಾತ್ರವೇ ಭಾರತ ತಂಡದಲ್ಲಿ 300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದರು.
300 ವಿಶ್ವ ಏಕದಿನ ಪಂದ್ಯಗಳಲ್ಲಿ ಆಡಿರುವ ಕೊಹ್ಲಿ 14,085 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ವಿಶ್ವದ 3ನೇ ಬ್ಯಾಟರ್ ಕೂಡ ಕೊಹ್ಲಿ ಆಗಿದ್ದಾರೆ. ಅಲ್ಲದೆ, ಈ ಪಂದ್ಯಗಳಲ್ಲಿ ಒಟ್ಟು 158 ಕ್ಯಾಚ್‌ಗಳನ್ನೂ ಕೊಹ್ಲಿ ಹಿಡಿದ್ದಾರೆ.