ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾದ ಇಂದು ಟೀಂ ಇಂಡಿಯಾ ಆಂಗ್ಲ ಪಡೆಯನ್ನು ಸೋಲಿಸಲು 6 ವಿಕೆಟ್‌ಗಳನ್ನು ಕಬಳಿಸಬೇಕಿದೆ. ಆಂಗ್ಲರ ಪರ ಬೆನ್ ಡಕೆಟ್ ಭರ್ಜರಿ ಶತಕ ದಾಖಲಿಸಿ ಉತ್ತಮ ಹೋರಾಟ ನಡೆಸಿದರು.
ಭಾರತ ನೀಡಿರುವ 371 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಇಂಗ್ಲೆಂಡ್ 2ನೇ ಇನಿಂಗ್ಸ್‌ನಲ್ಲಿ 58 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 269 ರನ್ ಪೇರಿಸಿದ್ದು, ದಿನದಾಂತ್ಯದ 37 ಓವರ್‌ಗಳಲ್ಲಿ ಗೆಲುವಿಗಾಗಿ 102 ರನ್‌ಗಳು ಬೇಕಿದೆ.
ವಿಕೆಟ್ ನಷ್ಟವಿಲ್ಲದೆ 21 ರನ್‌ಗಳೊಂದಿಗೆ ಕೊನೆಯ ದಿನದಾಟವನ್ನು ಪ್ರಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಬೆನ್ ಡೆಕೆಟ್ ಹಾಗೂ ಜ್ಯಾಕ್ ಕ್ರಾಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ ಭರ್ಜರಿ 188 ರನ್ ಪೇರಿಸಿದರು.
ಆಕರ್ಷಕ 65 ರನ್‌ಗಳೊಂದಿಗೆ ಅರ್ಧ ಶತಕ ಗಳಿಸಿದ ಕ್ರಾಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಔಟಾದರು. ಇವರ ಬೆನ್ಬಲ್ಲೇ ಓಲಿ ಪೋಪ್(8) ಅವರನ್ನು ಪ್ರಸಿದ್ಧ್ ಪೆವಿಲಿಯನ್‌ಗೆ ಕಳಿಸಿದರು.
ಭರ್ಜರಿ ಶತಕ ಗಳಿಸಿದ ಬೆನ್ ಡೆಕೆಟ್ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಬದಲಿ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. 170 ಚೆಂಡುಗಳಲ್ಲಿ ಡೆಕೆಟ್ 21 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್‌ಗಳೊಂದಿಗೆ 149 ರನ್ ಸಿಡಿಸಿದರು.
ಇದನ್ನು ಓದಿದ್ದೀರಾ? ಪ್ಯಾರಿಸ್ ಡೈಮಂಡ್ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿದ ಜಾವೆಲಿನ್ ತಾರೆ ನೀರಜ್ ಚೋಪ್ರಾ
ಇವರ ನಂತರ 5ನೇ ಕ್ರಮಾಂಕದಲ್ಲಿ ಆಗಮಿಸಿದ ಹ್ಯಾರಿ ಬ್ರೂಕ್ ಕೂಡ ಠಾಕೂರ್ ಬೌಲಿಂಗ್‌ನಲ್ಲಿ ಶೂನ್ಯ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಟೀ ವಿರಾಮದ ವೇಳೆಗೆ ನಾಯಕ ಬೆನ್ ಸ್ಟೋಕ್ಸ್(14) ಹಾಗೂ ಅನುಭವಿ ಜೋ ರೂಟ್ (13) ಆಡುತ್ತಿದ್ದಾರೆ
ಭಾರತದ ಕಳೆಪೆ ಕ್ಷೇತ್ರರಕ್ಷಣೆ
ಆಂಗ್ಲರ ಉತ್ತಮ ಆಟದಲ್ಲಿ ಭಾರತದ ಕಳಪೆ ಫೀಲ್ಡಿಂಗ್ ಕೂಡ ಕಾರಣವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 5 ಕ್ಯಾಚ್ಗಳನ್ನು ಕೈಚೆಲ್ಲಿದ್ದ ಟೀಂ ಇಂಡಿಯಾ 2ನೇ ಇನಿಂಗ್ಸ್ನಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದೆ. ಅದರಲ್ಲೂ ಮೊದಲ ಇನಿಂಗ್ಸ್‌ನಲ್ಲಿ ಪ್ರಮುಖ 3 ಕ್ಯಾಚ್ ಬಿಟ್ಟಿದ್ದ ಜೈಸ್ವಾಲ್ 2ನೇ ಇನಿಂಗ್ಸ್ನಲ್ಲೂ ಪಂದ್ಯದ ಗತ್ತಿಯನ್ನೇ ಬದಲಿಸಬಹುದಾಗಿದ್ದ ಕ್ಯಾಚ್ ಅನ್ನು ಕೈಚೆಲ್ಲಿದರು.
ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ 97ರನ್ ಬಾರಿಸಿ ಆಡುತ್ತಿದ್ದಾಗ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಜೈಸ್ವಾಲ್ಗೆ ಕ್ಯಾಚ್ ನೀಡಿದರು. ಆದರೆ ಜೈಸ್ವಾಲ್ ಮತ್ತೊಮ್ಮೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ವಿಫಲರಾದರು.