ಭರವಸೆಯ ಬ್ಯಾಟರ್ ಜೋ ರೂಟ್ (ಅಜೇಯ 99 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದೆ.
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇವರ ವಿಶ್ವಾಸಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಆರಂಭಿಕರು ಭರ್ಜರಿ ಆರಂಭ ನೀಡುವ ಸೂಚನೆ ನೀಡಿದರು. ಈ ವೇಳೆ ಆರಂಭಿಕ ಬೆನ್ ಡಕೆಟ್ (23), ನಿತೀಶ್ ಕುಮಾರ್ ಎಸೆದ ಔಟ್ ಬ್ಯಾಕ್ ಆಫ್ ಲೆಂಥ್ ಬಾಲನ್ನು ಕೆಣಕಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಜಾಕ್ ಕ್ರಾಲಿ ಸಹ ಇದೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್ ಬಾರಿಸಿದಾಗ ನಿತೀಶ್ ತೋಡಿದ ಖೆಡ್ಡಾಗೆ ಬಲಿಯಾದರು. ಇಂಗ್ಲೆಂಡ್ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಭರವಸೆಯ ಆಟಗಾರರಾದ ಒಲಿ ಪೋಪ್ ಹಾಗೂ ಜೋ ರೂಟ್ ಆಧಾರವಾದರು. ಈ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡುವಲ್ಲಿ ಸಫಲವಾಯಿತು.ಟೀಮ್ ಇಂಡಿಯಾ ಹಾಕಿಕೊಂಡ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿ ರನ್‌ಗಳನ್ನು ಕಲೆ ಹಾಕಿತು.
ಶತಕದ ಜೊತೆಯಾಟ 3ನೇ ವಿಕೆಟ್‌ಗೆ ಒಲಿ ಪೋಪ್ ಹಾಗೂ ಜೋ ರೂಟ್ ಜೋಡಿ 211 ಎಸೆತಗಳಲ್ಲಿ 109 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪೋಪ್ 44 ರನ್ ಬಾರಿಸಿದ್ದಾಗ ರವೀಂದ್ರ ಜಡೇಜಾ ಅವರ ಸ್ಪಿನ್ ಬೌಲಿಂಗ್ ಗುರುತಿಸುವಲ್ಲಿ ವಿಫಲರಾಗಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಹ್ಯಾರಿ ಬ್ರೂಕ್ (11 ರನ್) ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು ಕಾಲ್ತುಳಿತಕ್ಕೆ ಆರ್‌ಸಿಬಿ ಕಾರಣ: ಸಿಐಡಿ ತನಿಖಾ ವರದಿ
ಭಾರತದ ವಿರುದ್ಧ ರೂಟ್ ದಾಖಲೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು ಗುರುವಾರ ನಡೆದ ಪಂದ್ಯದಲ್ಲಿ 45 ರನ್ ಬಾರಿಸುತ್ತಿದ್ದಂತೆ ಹೊಸ ದಾಖಲೆ ಬರೆದರು. ಈ ಮೂಲಕ ಇವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಕಲೆ ಹಾಕಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಯಾವೊಬ್ಬ ಬ್ಯಾಟರ್ ಮಾಡಿರಲಿಲ್ಲ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ವಿರುದ್ಧ 2555 ಟೆಸ್ಟ್ ರನ್ ಬಾರಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
172 ರನ್‌ಗಳಿಗೆ 4 ವಿಕೆಟ್‌ಗಳು ಬಿದ್ದಾಗ ಕ್ರೀಸ್‌ಗೆ ಬಂದವರೇ ಬೆನ್ ಸ್ಟೋಕ್ಸ್. ಇವರು, ಭರವಸೆಯ ಆಟಗಾರ ಜೋ ರೂಟ್ ಅವರೊಂದಿಗೆ ಇನಿಂಗ್ಸ್ ಬೆಳೆಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ಜೋಡಿ 170 ಎಸೆತಗಳಲ್ಲಿ ಅಜೇಯ 79 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ಶುಕ್ರವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಜೋ ರೂಟ್ 9 ಬೌಂಡರಿ ನೆರವಿನಿಂದ ಅಜೇಯ 99 ರನ್ ಬಾರಿಸಿದರೆ, ಸ್ಟೋಕ್ಸ್ 102 ಎಸೆತಗಳನ್ನು ಎದುರಿಸಿ ಅಜೇಯ 39 ರನ್ ಸಿಡಿಸಿದ್ದಾರೆ. ಈ ಜೋಡಿ ಶುಕ್ರವಾರ ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಲಿದೆ. ಟೀಮ್ ಇಂಡಿಯಾದ ಪರ ನಿತೀಶ್ ಕುಮಾರ್ ರೆಡ್ಡಿ 2, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.