ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ. ತಂಡಗಳು ಹಾಗೂ ಪಂದ್ಯದಲ್ಲಿ ಬಲಿಷ್ಠರ್ಯಾರು. ದುರ್ಬಲರ್ಯಾರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಕ್ರೀಡಾ ಪ್ರೇಮಿಗಳಂತೆ ಎರಡೂ ತಂಡಗಳ ಆಟಗಾರರು ಕೂಡ ಉತ್ಸಾಹದಲ್ಲಿರುತ್ತಾರೆ. ಐಸಿಸಿ ಟ್ರೋಫಿಗಳಲ್ಲಿ ಹುಮ್ಮಸ್ಸಿಗೆ ಬರವೇ ಇರುವುದಿಲ್ಲ. ಇಂದು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್ಗೇರುವುದು ಬಹುತೇಕ ಖಚಿತವಾಗಲಿದೆ. ಪಾಕಿಸ್ತಾನ ತಂಡ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. 29 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿರುವ ಪಾಕಿಸ್ತಾನ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಐಸಿಸಿ ಏಕದಿನ ವಿಶ್ವಕಪ್‌ನ ವಿಚಾರಕ್ಕೆ ಬಂದಾಗ ಎರಡು ತಂಡಗಳಲ್ಲಿ ಭಾರತದ್ದೇ ಪಾರಮ್ಯ. ಈವರೆಗೆ ನಡೆದಿರುವ 8 ಪಂದ್ಯಗಳಲ್ಲಿ ಏಂಟರಲ್ಲೂ ಭಾರತವೇ ವಿಜಯಶಾಲಿಯಾಗಿದೆ. ಒಂದು ಬಾರಿಯೂ ಪಾಕ್‌ಗೆ ಗೆಲುವಿನ ನಗು ಬೀರಲು ಸಾಧ್ಯವಾಗಿಲ್ಲ.
ಆದರೆ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೂ ಭಾರತ ಮತ್ತು ಪಾಕಿಸ್ತಾನ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಜಯಗಳಿಸಿದೆ. ಅದರಲ್ಲೂ ಒಂದು ಬಾರಿ ಫೈನಲ್‌ನಲ್ಲೇ ಭಾರತವನ್ನು ಪಾಕ್ ತಂಡ ಸೋಲಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಒಟ್ಟಾರೆ ಇಲ್ಲಿಯವರೆಗೂ ಎರಡೂ ತಂಡಗಳು ಆಡಿರುವ 135 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕೇವಲ 57 ಪಂದ್ಯಗಳಲ್ಲಿ ಮಾತ್ರ ಗೆದ್ದರೆ, ಪಾಕಿಸ್ತಾನ 73 ಪಂದ್ಯಗಳಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. ಇನ್ನು ಐದು ಪಂದ್ಯಗಳು ಫಲಿತಾಂಶ ರಹಿತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಐಸಿಸಿ ಚಾಂಪಿಯನ್ಸ್ ಟ್ರೋಫಿ | 8 ತಂಡಗಳು, 15 ಪಂದ್ಯಗಳು: ವಿವರ ಇಲ್ಲಿದೆ ನೋಡಿ
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಣ ಕೊನೆಯ ಐದು ಏಕದಿನ ಪಂದ್ಯಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಟೀಮ್ ಇಂಡಿಯಾವೇ ಬಲಿಷ್ಠ. ಏಕೆಂದರೆ 2018 ರಿಂದ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಪಂದ್ಯವಾಡುವ ಉಭಯ ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಆಜಂ, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಇಮಾಮ್ ಉಲ್ ಹಕ್.
ಪಂದ್ಯ ಆರಂಭವಾಗುವ ಸಮಯ: ಮಧ್ಯಾಹ್ನ 2.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ಸ್ಟಾರ್ ಆ್ಯಪ್ ಹಾಗೂ ವೈಬ್ಸೈಟ್ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
