ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳಿಸಿಲು ಭಾರತ ನಿರಾಕರಿಸುತ್ತಲೇ ಇದೆ. ಹೀಗಾಗಿ, ಪ್ರತಿ ಬಾರಿಯೂ ಪಾಕ್ ತಂಡವು ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಲ್ಲಿ BCCI ತನ್ನ ಅಸಮರ್ಥತೆಯನ್ನು ICCಗೆ ತಿಳಿಸಿದೆ. ಇದರಿಂದಾಗಿ, ಚಾಂಪಿಯನ್ಸ್ ಟ್ರೋಫಿಯ ವಿಚಾರ ಗೊಂದಲ ಉಂಟುಮಾಡಿದೆ. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಐಸಿಸಿ ತನ್ನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಕರೆದಿದೆ. ಶುಕ್ರವಾರ ಸಭೆ ನಡೆಯಲಿದೆ.
ಟೂರ್ನಿಯ ಬಗ್ಗೆ ಪ್ರತಿಕ್ರಿಯಿಸಿರುವ ನಖ್ವಿ, “ಪಾಕಿಸ್ತಾನದ ತಂಡವು ಭಾರತಕ್ಕೆ ತೆರಳುತ್ತದೆ. ಟೂರ್ನಿಯಲ್ಲಿ ಭಾಗವಹಿಸುತ್ತದೆ. ಆದರೆ, ಭಾರತೀಯ ಅಧಿಕಾರಿಗಳು ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ಸಿದ್ಧರಿಲ್ಲ. ನಾವು ಅಂತಹ ಅಸಮಾನ ಪರಿಸ್ಥಿತಿಗೆ ಒಳಗಾಗಲು ಸಾಧ್ಯವಿಲ್ಲ” ಎಂದಿದ್ದಾರೆ.
“ಐಸಿಸಿ ಸಭೆಯಲ್ಲಿ ಏನೇ ನಡೆದರೂ ನಾವು ಒಳ್ಳೆಯ ಸುದ್ದಿ ಮತ್ತು ನಿರ್ಧಾರಗಳನ್ನು ಎದುರು ನೋಡುತ್ತೇವೆ. ಅದನ್ನು ನಮ್ಮ ಜನರು ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ” ಎಂದು ಹೇಳಿದ್ದಾರೆ.