ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ನೂತನ ಮಾಧವ್‌ರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಅ.6) ನಡೆದ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮಿಂಚಿನ ಆಟವಾಡಿ ಪ್ರವಾಸಿಗರ ವಿರುದ್ಧ ಭಾರತ ಟಿ20 ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
14 ವರ್ಷಗಳ ಬಳಿಕ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಸಾರಥ್ಯದ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಟಾಸ್ ಗೆದ್ದ ಭಾರತ ತಂಡ ಎದುರಾಳಿ ಬಾಂಗ್ಲಾದೇಶ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ನಾಯಕ ನಜ್ಮುಲ್ ಹುಸೇನ್ ಶಾಂತೊ (27) ಮತ್ತು ಆಲ್‌ರೌಂಡರ್ ಮೆಹ್ದಿ ಹಸನ್ ಮಿರಾಜ್ (35) ಅವರಿಂದ ಮೂಡಿಬಂದ ಅಲ್ಪ ಹೋರಾಟದ ಪರಿಣಾಮ ಬಾಂಗ್ಲಾದೇಶ ತಂಡ 127 ರನ್‌ಗಳಿಗೆ ಆಲೌಟ್ ಆಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
127 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಎಲ್ಲಿಯೂ ಕೂಡ ಒತ್ತಡಕ್ಕೆ ಸಿಲುಕಲಿಲ್ಲ. ಯುವ ಆರಂಭಿಕ ಅಭಿಷೇಕ್ ಶರ್ಮಾ, ಎದುರಿಸಿದ 7 ಎಸೆತಗಳಲ್ಲಿ 2 ಬೌಂಡರಿ ಮತ್ತೊಂದು ಸಿಕ್ಸರ್‌ನೊಂದಿಗೆ 16 ರನ್ ಬಾರಿಸಿ ಔಟಾದರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, 6 ಬೌಂಡರಿಗಳೊಂದಿಗೆ 19 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಾಯಕ ಸೂರ್ಯಕುಮಾರ್ ಯಾದವ್, ಸ್ಪೋಟಕ ಬ್ಯಾಟಿಂಗ್ ನಡೆಸಿ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 29 ರನ್ ಸಿಡಿಸಿ ದೊಡ್ಡ ಹೊಡೆತವನ್ನಾಡುವ ಪ್ರಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, 16 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 39 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಪದಾರ್ಪಣೆಯ ಪಂದ್ಯವನ್ನಾಡಿದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ 15 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ಉತ್ತಮ ಜೊತೆ ನೀಡಿದರು. 11.5 ಓವರ್‌ಗಳಲ್ಲೇ ಭಾರತ 132 ರನ್ ಬಾರಿಸಿ ಜಯಗಳಿಸಿತು. ಸರಣಿಯ ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 9ರಂದು ನಡೆಯಲಿದೆ.
