ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಶತಕ ಹಾಗೂ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಜವಾಬ್ದಾರಿಯುತ ಅರ್ಧ ಶತಕದ ನೆರವಿನಿಂದ ಟೀಮ್ ಇಂಡಿಯಾ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ವಿರುದ್ಧ ದಿನದ ಗೌರವಕ್ಕೆ ಪಾತ್ರವಾಗಿದೆ. ಮೊದಲ ದಿನದಾಟ ಮುಗಿದಾಗ ಭಾರತ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಪೇರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಸಮಯೋಚಿತ ಬ್ಯಾಟಿಂಗ್ ನಡೆಸುವಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ವಿಫಲರಾದರು. ಪ್ರವಾಸಿ ತಂಡ 15 ರನ್ ಕಲೆ ಹಾಕುವಷ್ಟರಲ್ಲಿ ಒಂದು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 90 ಎಸೆತಗಳಲ್ಲಿ 80 ರನ್ ಸೇರಿಸಿತು. ಇನ್ನು ಕರುಣ್ ನಾಯರ್ (31) ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.
ಇದನ್ನು ಓದಿದ್ದೀರಾ? ಮೂವರು ಸ್ಟಾರ್ ಆಟಗಾರರ ದಾಖಲೆ ಮುರಿಯುವ ಹೊಸ್ತಿಲಲ್ಲಿ ಯಶಸ್ವಿ ಜೈಸ್ವಾಲ್
ಮೂರನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. ಈ ಜೋಡಿ 131 ಎಸೆತಗಳಲ್ಲಿ 66 ರನ್ ಸೇರಿಸಿತು. ಈ ವೇಳೆ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ ಕಳಪೆ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 107 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 87 ರನ್ ಬಾರಿಸಿ ಅಬ್ಬರಿಸಿದರು.
ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದ ಉಪನಾಯಕ ರಿಷಭ್ ಪಂತ್, ನಾಯಕನ ಜೊತೆಗೂಡಿದರು. 1 ಬೌಂಡರಿ, 1 ಸಿಕ್ಸರ್ ನೆರವಿನಿಂದ 25 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಪೆವಿಲಿಯನ್‌ಗೆ ತೆರಳಿದರು. ಎರಡನೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ನಿತೀಶ್ ಕುಮಾರ್ ರೆಡ್ಡಿ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.
ನಾಯಕ ಶುಭಮನ್ ಗಿಲ್ ಅವರನ್ನು ಸೇರಿಕೊಂಡ ಆಲ್‌ರೌಂಡರ್ ರವೀಂದ್ರ ಜಡೇಜಾ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 142 ಎಸೆತಗಳಲ್ಲಿ ಅಜೇಯ 99 ರನ್ ಸೇರಿಸಿ ತಂಡಕ್ಕೆ ಆಧಾರವಾಗಿದೆ. ಅಲ್ಲದೆ ಈ ಜೊಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಈ ವೇಳೆ ರವೀಂದ್ರ ಜಡೇಜಾ 5 ಬೌಂಡರಿ ನೆರವಿನಿಂದ ಅಜೇಯ 41 ರನ್ ಬಾರಿಸಿದರು. ನಾಯಕ ಶುಭಮನ್ ಗಿಲ್ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿದರು. ಶುಭಮನ್ 216 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ ಅಜೇಯ 114 ರನ್ ಬಾರಿಸಿ ಗುರುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಾಯಕನಾಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸುವ ಮೂಲಕ ಭಾರತದ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಸಾಧನೆಯನ್ನು ಗಿಲ್ ಸರಿಗಟ್ಟಿದ್ದಾರೆ.