ಭಾರತ-ಪಾಕಿಸ್ತಾನ ನಡುವೆ ನಡೆದ ಇತ್ತೀಚಿನ ಮಿಲಿಟರಿ ಘರ್ಷಣೆಗಳ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಎಲ್ಲ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಹಾಗೆಯೇ ಈ ವರ್ಷಾಂತ್ಯದಲ್ಲಿ ಪುರುಷರ ಏಷ್ಯಾಕಪ್ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿತ್ತು. ಇದೀಗ ಈ ಟೂರ್ನಿಯಿಂದಲೂ ಭಾರತ ಹೊರಗುಳಿಯುವುದಾಗಿ ಬಿಸಿಸಿಐ ತಿಳಿಸಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಯು ಭಾರತದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಮುಂಬರುವ ಟಿ20 ವಿಶ್ವಕಪ್ ಅನ್ನು ಕೇಂದ್ರೀಕರಿಸಿ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೀಗ ಆತಿಥ್ಯದ ಹಕ್ಕನ್ನು ಹೊಂದಿರುವ ಭಾರತವೇ ಟೂರ್ನಿಯಿಂದ ಹಿಂದೆ ಸರಿದಿದೆ. ಹೀಗಾಗಿ ಟೂರ್ನಿ ನಡೆಯುವ ಸಾಧ್ಯತೆಯಿಲ್ಲ ಎನ್ನಬಹುದು.
ಇದನ್ನು ಓದಿದ್ದೀರಾ? ಐಪಿಎಲ್ 2025: ಪ್ಲೇ ಆಫ್‌ನಲ್ಲಿ ಯಾರ್ಯಾರು ಆಡುವುದಿಲ್ಲ: ಆಟಗಾರರ ಪಟ್ಟಿ ಇಲ್ಲಿದೆ
ಏಷ್ಯಾಕಪ್ ಟೂರ್ನಿಗೆ ಅತೀ ಹೆಚ್ಚು ಪ್ರಾಯೋಜಕತ್ವ ಸಿಗುವುದು ಭಾರತದಿಂದ. ಇದೀಗ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಗುಳಿದರೆ, ಪ್ರಾಯೋಜಕರ ಕೊರತೆ ಎದುರಾಗಲಿದೆ. ಅಲ್ಲದೆ ಆದಾಯದ ಮೇಲೂ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಈ ಬಾರಿ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಪಾಕಿಸ್ತಾನದ ಸಚಿವರು ಮುಖ್ಯಸ್ಥರಾಗಿರುವ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ. ಹೀಗಾಗಿ ಮುಂಬರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ನಾವು ಈಗಾಗಲೇ ಎಸಿಸಿಗೆ ಮೌಖಿಕವಾಗಿ ತಿಳಿಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೀಗಾಗಿ ಈ ವರ್ಷದ ನಡೆಯಲಿರುವ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳುವುದಿಲ್ಲ. ಈ ಮೂಲಕ ಪಾಕಿಸ್ತಾನದ ಕ್ರಿಕೆಟ್ ಆದಾಯಕ್ಕೂ ಹೊಡೆತ ನೀಡಲು ಭಾರತ ಮುಂದಾಗಿದೆ.
2023 ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲೌಟ್ ಮಾಡಿ ಟ್ರೋಫಿ ಜಯಿಸಿತ್ತು.