ಕೌಲಾಲಂಪುರ್ನಲ್ಲಿ ನಡೆದ ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ರೋಚಕ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಆರಂಭಿಸಿದ ನಿಕ್ಕಿ ಪ್ರಸಾದ್ ಸಾರಥ್ಯದ ಭಾರತ ತಂಡಕ್ಕೆ ಬಾಂಗ್ಲಾ ಯುವ ಬೌಲರ್‌ಗಳು ಆರಂಭದಲ್ಲೇ ವಿಕೆಟ್ ಉರುಳಿಸುವ ಮೂಲಕ ಆಘಾತ ನೀಡಿದರು. 25 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಶಾ (52 ರನ್) ಹಾಗೂ ನಾಯಕಿ ನಿಕ್ಕಿ ಪ್ರಸಾದ್ (12 ರನ್) 3ನೇ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು. ಅಂತಿಮವಾಗಿ ಭಾರತ 20 ಓವರ್‌ಗಳಿಗೆ 117/7 ಮೊತ್ತ ಗಳಿಸಿತು. ಬಾಂಗ್ಲಾ ಪರ ಫಾರ್ಜನಾ ಎಸಿನ್ (31ಕ್ಕೆ 4) ವಿಕೆಟ್ ಕಬಳಿಸಿದರು.
ಈ ಸುದ್ದಿ ಓದಿದ್ದೀರಾ? ಆರ್ ಅಶ್ವಿನ್ | ಸಾಧಾರಣ ಕುಟುಂಬದ ಹುಡುಗ ಸ್ಟಾರ್ ಕ್ರಿಕೆಟಿಗನಾದ ಕತೆ
ಈ ಅಲ್ಪ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ಪರ ಫಾಹೊಮಿಡಾ ಚೋಯಾ (18 ರನ್) ಹಾಗೂ ಜುರಿಯಾ ಫೆರೋಡಿಸ್ (22 ರನ್) ಬಿಟ್ಟರೆ ಉಳಿದ ಯಾವುದೇ ಆಟಗಾರ್ತಿಯರು ಎರಡಂಕಿ ದಾಟದೆ ಭಾರತದ ಬೌಲರ್‌ಗಳ ಬಲೆಯಲ್ಲಿ ಸೆರೆಯಾಗಿ 18.3 ಓವರ್‌ಗಳಲ್ಲಿ 76 ರನ್‌ಗಳಿಗೆ ಸರ್ವಪತನ ಕಂಡು 41 ರನ್‌ಗಳ ಮುಖಭಂಗ ಅನುಭವಿಸಿತು.
ಭಾರತ ಪರ ಆಯುಷಿ ಶುಕ್ಲಾ (17ಕ್ಕೆ 3) ಯಶಸ್ವಿ ಬೌಲರ್ ಎನಿಸಿದರೆ, ಪೂರ್ಣಿಕಾ ಸಿಸೋಡಿಯಾ (12ಕ್ಕೆ 2), ಸೋನಮ್ ಯಾದವ್ (13ಕ್ಕೆ2) ಹಾಗೂ ವಿಜೆ ಜೋಷಿತಾ ಒಂದು ವಿಕೆಟ್ ಪಡೆದು ಬಾಂಗ್ಲಾ ಆಟಗಾರ್ತಿಯರ ಬ್ಯಾಟಿಂಗ್ ಬಲ ಮುರಿದರು. ಗೊಂಗಾಡಿ ತ್ರಿಷಾ ಪಂದ್ಯ ಶ್ರೇಷ್ಠರಾದರು.
