ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಅದ್ಭುತ ಸಾಧನೆ ಮುಂದುವರಿಸಿದ್ದಾರೆ. ಬುಧವಾರ ಒಂದೇ ದಿನದಲ್ಲಿ 5 ಚಿನ್ನ ಸೇರಿದಂತೆ ಒಟ್ಟು 27 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರೊಂದಿಗೆ ಕ್ರೀಡಾಕೂಟ ಶುರುವಾದ ಕೇವಲ ಮೂರು ದಿನಗಳಲ್ಲಿ ಭಾರತ ಒಟ್ಟು 62 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡು ಬೀಗುತ್ತಿದೆ.
ಭಾರತ ಸದ್ಯಕ್ಕೆ 14 ಚಿನ್ನ, 22 ಬೆಳ್ಳಿ ಹಾಗೂ 26 ಕಂಚಿನ ಪದಕಗಳ ಬೇಟೆಯೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಮೂಲಕ ಥಾಯ್ಲೆಂಡ್ ಹಾಗೂ ಇರಾನ್ ದೇಶಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ಇನ್ನೊಂದೆಡೆ, ಆತಿಥ್ಯ ವಹಿಸಿರುವ ಚೀನಾ ದೇಶವು 107 ಚಿನ್ನ ಸೇರಿದಂತೆ ಒಟ್ಟು 226 ಪದಕಗಳನ್ನು ಗೆದ್ದು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಜಪಾನ್ 100 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಭಾರತ ಗೆದ್ದಿರುವ ಪದಕಗಳಲ್ಲಿ ಅಥ್ಲೆಟಿಕ್ಸ್ ವಿಭಾಗದ ಕೊಡುಗೆ ಅಪಾರವಾಗಿದೆ. ಬುಧವಾರ ಒಂದೇ ದಿನ ಅಥ್ಲೆಟಿಕ್ಸ್‌ನಲ್ಲಿ 5 ಚಿನ್ನ ಸೇರಿದಂತೆ ಒಟ್ಟು 18 ಪದಕಗಳು ಭಾರತದ ಪಾಲಾಗಿವೆ. ಇದುವರೆಗೂ ಅಥ್ಲೆಟಿಕ್ಸ್ ವಿಭಾಗದಿಂದಲೇ 13 ಚಿನ್ನ, 14 ಬೆಳ್ಳಿ ಮತ್ತು 15 ಕಂಚಿನ ಪದಕಗಳು ಸೇರಿದಂತೆ ಒಟ್ಟು 42 ಪದಕಗಳು ಲಭ್ಯವಾಗಿದ್ದು, ಇದು ಭಾರತದ ಯಶಸ್ಸಿನ ಪ್ರಮುಖ ಶಕ್ತಿಯಾಗಿದೆ.
ಮಹಿಳೆಯರ 100 ಮೀ. ಟಿ12 ವಿಭಾಗದಲ್ಲಿ ಸಿಮ್ರಾನ್ 12.02 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ನೂತನ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಪುರುಷರ ಹೈಜಂಪ್ ಟಿ44/64 ವಿಭಾಗದಲ್ಲಿ ಪ್ರವೀಣ್ ಕುಮಾರ್ ಹಾಗೂ ಶಾಟ್‌ಪುಟ್ ಎಫ್46 ವಿಭಾಗದಲ್ಲಿ ಸಚಿನ್ ಖಿಲಾರಿ ಕೂಡ ಹೊಸ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಆಯುಷ್ ವರ್ಮಾ (ಶಾಟ್‌ಪುಟ್ ಎಫ್53) ಮತ್ತು ದಿಲೀಪ್ ಗಾವಿತ್ (100 ಮೀ. ಟಿ47) ಕೂಡ ಚಿನ್ನದ ಪದಕ ಗೆದ್ದಿದ್ದಾರೆ.
ಆರ್ಚರಿ ವಿಭಾಗದಲ್ಲಿ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಜೋಡಿಯು ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈಜು ಸ್ಪರ್ಧೆಯಲ್ಲಿ ರವಿ ಕಾರ್ತಿಕ್ ಬುಡಿಗಿನಾ (100 ಮೀ. ಬ್ಯಾಕ್‌ಸ್ಟ್ರೋಕ್ ಎಸ್13) ಬೆಳ್ಳಿ ಪದಕ ಹಾಗೂ ಹಿಮಾಂಶು ನಂದಲ್ ಕಂಚಿನ ಪದಕ ತಂದಿದ್ದಾರೆ. ಪವರ್‌ಲಿಫ್ಟಿಂಗ್‌ನಲ್ಲಿ ಕಸ್ತೂರಿ ರಾಜಾಮಣಿ ಅವರು ಮಹಿಳೆಯರ 67 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೂ ಭಾರತದ ಹವಾ ಮುಂದುವರಿದಿದೆ. ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಸುಹಾಸ್ ಎಲ್.ವೈ, ನವೀನ್ ಶಿವಕುಮಾರ್ ಮತ್ತು ಅಭಿಜೀತ್ ಸಖುಜಾ ಸೆಮಿಫೈನಲ್‌ಗೆ ಲಗ್ಗೆಯಿಡುವ ಮೂಲಕ ಭಾರತಕ್ಕೆ ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಕೃಷ್ಣಾ ನಗರ್ ಹಾಗೂ ಶಿವರಂಜನ್ ಸೊಲೈಮಲೈ ಅವರು ಪುರುಷರ ಡಬಲ್ಸ್ ಎಸ್‌ಎಚ್6 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು, ಭಾರತ ಕ್ರೀಡಾಕೂಟದಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ಭರವಸೆ ಮೂಡಿಸಿದ್ದಾರೆ.





