ಚೆನ್ನೈನ ಎಂ ಎ ಚಿದಂಬರಮ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ಸಿಲುಕಿ 149 ರನ್‌ಗಳಿಗೆ ಆಲೌಟ್ ಆಗಿದೆ. ಫಾಲೋಆನ್ ಅವಕಾಶ ನೀಡದೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ 308 ರನ್‌ಗಳ ಮುನ್ನಡೆ ಪಡೆದಿದೆ.
6 ವಿಕೆಟ್ ನಷ್ಟಕ್ಕೆ 339 ರನ್‌ಗಳೊಂದಿಗೆ ಎರಡನೇ ದಿನದಾಟ ಶುರುಮಾಡಿದ ಭಾರತ 91.2 ಓವರ್‌ಗಳಲ್ಲಿ ಆಲೌಟ್ ಆಯಿತು. ಟೀಂ ಇಂಡಿಯಾದ 376 ರನ್ ಮೊತ್ತಕ್ಕೆ ರವಿಚಂದ್ರನ್ ಅಶ್ವಿನ್ ಶತಕ (113), ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಪ್ರಮುಖ ಕಾರಣಕರ್ತರಾದರು.
ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಟೀಂ ಇಂಡಿಯಾದ ಬೌಲರ್‌ಗಳ ಕರಾರುವಾಕ್ ದಾಳಿಗೆ 47.1 ಓವರ್‌ಗಳಲ್ಲಿ 149 ರನ್‌ಗಳಿಗೆ ಆಲೌಟ್ ಆಗಿ 227 ರನ್ ಹಿನ್ನಡೆ ಅನುಭವಿಸಿತು. ಬೂಮ್ರಾ 50 ರನ್‌ಗಳಿಗೆ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಮೊಹಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ಕೂಡ ತಲಾ 2 ವಿಕೆಟ್ ಕಿತ್ತು ಪ್ರವಾಸಿಗರ ಪತನಕ್ಕೆ ಕಾರಣರಾದರು.
ಈ ಸುದ್ದಿ ಓದಿದ್ದೀರಾ? ಬಾಂಗ್ಲಾ ವಿರುದ್ಧದ ಟೆಸ್ಟ್: ಮೊದಲ ಇನಿಂಗ್ಸ್‌ನಲ್ಲಿ 376 ಪೇರಿಸಿದ ಭಾರತ, ಪ್ರವಾಸಿಗರಿಗೆ ಆರಂಭಿಕ ಆಘಾತ
ಬಾಂಗ್ಲಾದೇಶದ ಪರ ಶಕೀಬ್(32), ಲಿಟ್ಟನ್(22), ಮೆಹದಿ(27) ಹಾಗೂ ಶಾಂಟೋ(20) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳ್ಯಾರು ಹೆಚ್ಚು ಪ್ರತಿರೋಧ ತೋರಲಿಲ್ಲ.
ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ 23 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಶುಭಮನ್ ಗಿಲ್ ಅಜೇಯ 32 ಹಾಗೂ ರಿಷಬ್ ಪಂತ್ ಅಜೇಯ 12 ರನ್ ಗಳಿಸಿ ಆಡುತ್ತಿದ್ದಾರೆ.
