ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ವಿರಾಟ್ ಕೊಹ್ಲಿಯವರ ಅರ್ಧಶತಕದ ನೆರವಿನಿಂದ 177 ರನ್‌ಗಳ ಸವಾಲಿನ ಗುರಿ ನೀಡಿದೆ.
India post the highest-ever total in a men’s T20 World Cup final!https://t.co/L6YamlfxUQ | #SAvIND | #T20WorldCup pic.twitter.com/7J8RUW243X
— ESPNcricinfo (@ESPNcricinfo) June 29, 2024
ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಬಳಗ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೊತ್ತವು ಪುರುಷರ T20 ವಿಶ್ವಕಪ್ ಫೈನಲ್‌ನಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಮೊತ್ತವಾಗಿದೆ. 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ದಕ್ಷಿಣ ಆಫ್ರಿಕಾವನ್ನು ಬೌಲಿಂಗ್ ದಾಳಿ ಮೂಲಕ ನಿಯಂತ್ರಿಸಬೇಕಿದೆ.
ಟೀಮ್ ಇಂಡಿಯಾಗೆ ಆರಂಭಿಕ ಆಘಾತ
ಮಾರ್ಕೊ ಜಾನ್ಸೆನ್ ಎಸೆದ ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಬಳಿಕ ಎರಡನೇ ಓವರ್ ಎಸೆದ ಕೇಶವ್ ಮಹಾರಾಜ್ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಅವರ ವಿಕೆಟ್ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದರು.
ಆ ಬಳಿಕ ದಾಳಿಗಿಳಿದ ಕಗೀಸೋ ರಬಾಡಾ ಸೂರ್ಯ ಕುಮಾರ್ ಯಾದವ್ ಅವರ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಕ್ಕೆ ಮತ್ತೊಂದು ಆಘಾತ ನೀಡಿದರು. 4.3 ಓವರ್‌ನ ವೇಳೆ ಟೀಮ್ ಇಂಡಿಯಾ 34 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಜೊತೆಗೆ ಜೊತೆಯಾಟ ನಡೆಸಿದ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್, ಸೆಮಿಫೈನಲ್ ಪಂದ್ಯದ ಹೀರೋ ಅಕ್ಷರ್ ಪಟೇಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಇನ್ನಿಂಗ್ಸ್ ಕಟ್ಟಿದರು. 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 1 ಬೌಂಡರಿಯ ನೆರವಿನಿಂದ 47 ರನ್ ಗಳಿಸಿದ್ದಾಗ ಕ್ವಿಂಟನ್ ಡಿ ಕಾಕ್ ಎಸೆದ ಅದ್ಭುತವಾದ ಥ್ರೋಗೆ ಅನಿರೀಕ್ಷಿತವಾಗಿ ರನೌಟ್ ಆದರು. ಆ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.
ಆರಂಭಿಕ ಆಘಾತದ ಬಳಿಕ ಉತ್ತಮ ಜೊತೆಯಾಟ ನಡೆಸಿದ ಕೊಹ್ಲಿ-ಅಕ್ಷರ್ ಪಟೇಲ್ ಜೋಡಿಯು 72 ರನ್‌ಗಳ ಜೊತೆಯಾಟ ನಡೆಸಿದರು. ಬಳಿಕ ಕ್ರೀಸ್‌ನಲ್ಲಿ ನಿಂತು ಸಾವಧಾನದ ಆಟವಾಡಿದ ಕಿಂಗ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಅರ್ಧಶತಕ ಗಳಿಸಿದರು. ಶಿವಂ ದುಬೆ 27 ರನ್ ಗಳಿಸುವ ಮೂಲಕ ಅಗತ್ಯ ಕೊಡುಗೆ ನೀಡಿದರು. ಕೊನೆಯಲ್ಲಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸಿ, ಮಾರ್ಕರಮ್ ಬಳಗಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.
ಇದನ್ನು ಓದಿದ್ದೀರಾ? ಮಹಿಳೆಯರ ಟೆಸ್ಟ್ ಕ್ರಿಕೆಟ್ | 603 ರನ್ ಕಲೆ ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಕೇಶವ್ ಮಹಾರಾಜ್ 23ಕ್ಕೆ 2, ನೋರ್ಜೆ 26ಕ್ಕೆ 2 ವಿಕೆಟ್ ಗಳಿಸಿದರು. ಉಳಿದಂತೆ ರಬಾಡ ಹಾಗೂ ಜಾನ್ಸೆನ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
