ಕೌಲಲಾಂಪುರದ ಬಯುಮಾಸ್ ಓವಲ್‌ನಲ್ಲಿ ಶುಕ್ರವಾರ ನಡೆದ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
114 ರನ್‌ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ಕೇವಲ 15 ಓವರ್‌ಗಳಲ್ಲಿ ಗುರಿ ತಲುಪಿತು. ಆರಂಭಿಕ ಆಟಗಾರ್ತಿ ಜಿ.ಕಮಲಿನಿ 50 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ, ಮಿಂಚಿದರು. ಗೊಂಗಾಡಿ ತ್ರಿಷಾ ಅವರೊಂದಿಗೆ ಅವರ 60 ರನ್ ಗಳ ಆರಂಭಿಕ ಜೊತೆಯಾಟವು ಸುಲಭ ರನ್ ಚೇಸ್‌ಗೆ ವೇದಿಕೆ ಕಲ್ಪಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದಾಗ್ಯೂ, ಡೇವಿನಾ ಪೆರಿನ್ ಮತ್ತು ಜೆಮಿಮಾ ಸ್ಪೆನ್ಸ್ ನಡುವಿನ 37 ರನ್‌ಗಳ ಆರಂಭಿಕ ಜೊತೆಯಾಟದ ನಂತರ, ಇಂಗ್ಲೆಂಡ್ ಎರಡು ವಿಕೆಟ್‌ಗಳನ್ನು ವೇಗವಾಗಿ ಕಳೆದುಕೊಂಡಿತು.

ಪೆರಿನ್ ಮತ್ತು ನಾಯಕಿ ಅಬಿ ನಾರ್ಗ್ರೋವ್ ಮೂರನೇ ವಿಕೆಟ್‌ಗೆ 44 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಕಟ್ಟಿದರು. ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದ್ದಾಗ ಭಾರತದ ಸ್ಪಿನ್ನರ್‌ಗಳಾದ ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ ಮತ್ತು ವೈಷ್ಣವಿ ಶರ್ಮಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ತಂಡದ ಮೊತ್ತಕ್ಕೆ ಕೇವಲ 11 ರನ್ ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂಗ್ಲೆಂಡ್ 16ನೇ ಓವರ್ ವೇಳೆಗೆ 8 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತ್ತು.ಕೊನೆಗೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಟೀಮ್ ಇಂಡಿಯಾ, 15 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 117 ರನ್ ಗಳಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಯಿತು.
2023ರ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಶಫಾಲಿ ವರ್ಮಾ ನೇತೃತ್ವದ ಭಾರತ ತಂಡವು ಫೈನಲ್ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ
ಈ ಬಾರಿ ಇದೇ ಮೈದಾನದಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಮಣಿಸಿ, ಫೈನಲ್ ಪ್ರವೇಶಿಸಿತ್ತು.
