ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಭಾರತಕ್ಕೆ ಇನ್ನೆರಡೇ ಹಜ್ಜೆ ಬಾಕಿಯುಳಿದಿದೆ. ಲೀಗ್, ಸೂಪರ್ 8 ಒಳಗೊಂಡು ಎಲ್ಲ ಪಂದ್ಯಗಳಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾ ಟೂರ್ನಿಯಲ್ಲಿ ಪ್ರಬಲ ತಂಡವೆನಿಸಿದೆ. ಈಗಾಗಲೇ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಿ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಿದೆ. ಭಾರತ – ಆಂಗ್ಲರ ಕ್ರಿಕೆಟ್ ಕಾದಾಟದಲ್ಲಿ ಜಯಗಳಿಸಿದ ತಂಡ ಹರಿಣಗಳ ಜೊತೆ ಟ್ರೋಫಿಗಾಗಿ ಸೆಣಸಾಡಲಿದೆ.
2007ರಲ್ಲಿ ಆರಂಭವಾದ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೊದಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಅನಂತರದಲ್ಲಿ ಕಳೆದ 17 ವರ್ಷಗಳಲ್ಲಿ ಟೀಂ ಇಂಡಿಯಾ 2014ರಲ್ಲಿ ಫೈನಲ್ ಪ್ರವೇಶಿಸಿದರೂ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿತ್ತು. ಈಗ ಭಾರತ ಫೈನಲ್ ತಲುಪಲು ಒಂದು ಮೆಟ್ಟಿಲು ಮಾತ್ರ ಬಾಕಿಯಿದೆ.
ಎದುರಾಳಿ ಇಂಗ್ಲೆಂಡ್ ಕಳೆದ ಬಾರಿಯ ಹಾಲಿ ಚಾಂಪಿಯನ್ ಕೂಡ. 2010ರಲ್ಲಿಯೂ ಕಪ್ ಎತ್ತಿ ಹಿಡಿದಿರುವ ಆಂಗ್ಲರ ಪಡೆ ಮೂರನೇ ಬಾರಿ ಟ್ರೋಫಿಯ ಮೇಲೆ ಕಣ್ಣಿಡುತ್ತಿದೆ. 2022ರ ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ರೋಹಿತ್ ಶರ್ಮಾ ಹಾಗೂ ಜೋಸ್ ಬಟ್ಲರ್ ಈ ಬಾರಿಯೂ ತಮ್ಮ ತಂಡಗಳ ನೇತೃತ್ವ ವಹಿಸಿಕೊಂಡಿದ್ದು, ಗೆಲುವಿಗಾಗಿ ಪೈಪೋಟಿಗಿಳಿದಿದ್ದಾರೆ. ಅದಲ್ಲದೆ ಸುಮಾರು 19 ತಿಂಗಳ ನಂತರ, ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಉಭಯ ತಂಡಗಳಲ್ಲಿ ಸಮಾನ ಗೆಲುವು
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಲ್ಲಿಯವರೆಗೂ 23 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್ 11 ಪಂದ್ಯಗಳಲ್ಲಿ ಜಯ ಕಂಡಿದೆ. ಅದಲ್ಲದೆ ಭಾರತ ಶೇ.52.17ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಈ ಎರಡು ತಂಡಗಳು ಕೊನೆಯ ಬಾರಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದವು, ಆಗ ಭಾರತ 2-1 ಅಂತರದಿಂದ ಜಯಗಳಿಸಿತ್ತು. ಇದಲ್ಲದೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು 2022ರ ಸೆಮಿಫೈನಲ್ ಸೇರಿದಂತೆ ಟಿ20 ವಿಶ್ವಕಪ್‌ಗಳಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು 2-2 ಅಂತರದಲ್ಲಿ ಗೆಲುವು ಸಾಧಿಸಿವೆ.
ಭಾರತ ತಂಡಕ್ಕಿದೆ ಬಲಿಷ್ಠ ಪಡೆ
ಟೂರ್ನಿಯಲ್ಲಿ ಟೀಂ ಇಂಡಿಯಾ ಆಟವನ್ನು ಗಮನಿಸಿದರೆ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಬೌಲಿಂಗ್, ಬ್ಯಾಟಿಂಗ್ ಹಾಗೂ ಕ್ಷೇತ್ರ ರಕ್ಷಣೆ ಎಲ್ಲ ವಿಭಾಗದಲ್ಲೂ ಬಲಿಷ್ಠ ತಂಡವೆನಿಸಿದೆ.
ಟೀಮ್ ಇಂಡಿಯಾದಲ್ಲಿ ಸದ್ಯ ಸ್ಟಾರ್ ಆಟಗಾರರ ದಂಡೇ ಇದೆ. ಭಾರತಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೂಪರ್ 8 ಪಂದ್ಯದಲ್ಲಿ ಕೇವಲ 41 ಚೆಂಡುಗಳಲ್ಲಿ 92 ರನ್ ಸಿಡಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಇಂಗ್ಲೆಂಡ್ ವಿರುದ್ಧ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಹೊಂದಿರುವ ಕಾರಣ ಆಟವು ಮತ್ತಷ್ಟು ರೋಚಕವಾಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇವಿಡ್ ವಾರ್ನರ್
ಸೂರ್ಯಕುಮಾರ್ ಯಾದವ್- ಟೀಮ್ ಇಂಡಿಯಾದ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ ಸೂರ್ಯ ಈ ವಿಶ್ವಕಪ್‌ನಲ್ಲಿ ಲಯಕ್ಕೆ ಮರಳುತ್ತಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ. ಉದಯೋನ್ಮುಖ ಆಟಗಾರ ಶಿವಂ ದುಬೆ ಉಪಯುಕ್ತ ರನ್ ಕೊಡುಗೆಯೊಂದಿಗೆ ತಂಡಕ್ಕೆ ನೆರವಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಎದುರಾಳಿಗಳಿಗೆ ನಡುಕ ಹುಟ್ಟಿಸುವ ಟೀಂ ಇಂಡಿಯಾದ ಪ್ರಮುಖ ಅಸ್ತ್ರ. ಮತ್ತೊಬ್ಬ ವೇಗಿ ಅರ್ಷದೀಪ್ ಸಿಂಗ್ ಕೂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಂದ್ಯ ನಡೆಯುವ ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳ ಸ್ನೇಹಿಯಾಗಿದ್ದು, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಅವರಿಗೆ ಹೆಚ್ಚು ನೆರವಾಗಲಿದೆ.
ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ – ಇಂಗ್ಲೆಂಡ್‌ನಲ್ಲಿದೆ ಉತ್ತಮ ಬೌಲಿಂಗ್ ಪಡೆ
ಇಂಗ್ಲೆಂಡ್ ತಂಡದಲ್ಲಿ ಕೂಡ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಟಗಾರರಿದ್ದಾರೆ. ನಾಯಕ ಜೋಸ್ ಬಟ್ಲರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ಮತ್ತೊಬ್ಬ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ಕೂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಾನಿ ಬೆಸ್ಟೊ, ಹ್ಯಾರಿ ಬ್ರೂಕ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ರನ್‌ಗಳ ಹೊಳೆ ಹರಿಸಲು ಸಮರ್ಥರಿದ್ದಾರೆ ಹಾಗೂ ಬಿರುಸಿನ ಹೊಡೆತಗಳ ಆಟಗಾರ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ತಂಡಕ್ಕೆ ನೆರವಾಗುವ ಸಾಧ್ಯತೆಯಿದೆ.
ಬೌಲಿಂಗ್‌ನಲ್ಲಿ ಜೋಫ್ರಾ ಅರ್ಚರ್, ಕ್ರಿಸ್ ಜೋರ್ಡಾನ್ ಟೀಂ ಇಂಡಿಯಾ ಆಟಗಾರರಿಗೆ ಕಾಡಬಹುದು. ಅದೇ ರೀತಿ ಮುಂಚೂಣಿ ಹಾಗೂ ಅನುಭವಿ ಸ್ಪಿನ್ನರ್‌ಗಳಾಗಿರುವ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ಪಂದ್ಯಕ್ಕೆ ‘ತಿರುವು’ ನೀಡಬಲ್ಲ ಸ್ಪಿನ್ನರ್‌ಗಳು. ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ನೀಡುವ ಸಮರ್ಥರು.
ಮಳೆ ಬಂದರೆ ಮೀಸಲು ದಿನವಿಲ್ಲ
ಕುತೂಹಲಕಾರಿ ಮಾಹಿತಿಯಂದರೆ ಎರಡೂ ಸೆಮಿಫೈನಲ್‌ಗಳಿಗೆ ವಿಭಿನ್ನ ನಿಯಮಗಳಿವೆ. ಐಸಿಸಿ ಮೊದಲ ಸೆಮಿಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸಿತ್ತು. ಅಂದರೆ ಪಂದ್ಯದಲ್ಲಿ ಮಳೆ ಬಂದರೆ ಮರುದಿನ ನಡೆಸಲಾಗುತ್ತದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಇಟ್ಟಿಲ್ಲ. ಇದರ ಬದಲಿಗೆ 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಇರಿಸಲಾಗಿದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಅದೂ ಸಾಧ್ಯವಾಗದಿದ್ದಾಗ ಪಂದ್ಯ ರದ್ದು ಮಾಡಲಾಗುತ್ತದೆ. ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಫಲಿತಾಂಶವನ್ನು ಟೂರ್ನಿನಲ್ಲಿ ಹೆಚ್ಚು ರನ್ ರೇಟ್ ಹಾಗೂ ಗೆಲುವು ಹೊಂದಿರುವ ತಂಡವನ್ನು ಗೆಲುವಿನ ತಂಡ ಎಂದು ನಿರ್ಧರಿಸಲಾಗುತ್ತದೆ. ಅದೇ ರೀತಿ ಒಂದು ವೇಳೆ ಫೈನಲ್‌ನಲ್ಲೂ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಪಂದ್ಯವಾಡುವ ಉಭಯ ತಂಡಗಳ ಸಂಭಾವ್ಯ ಆಟಗಾರರು
ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್.
ಇಂಗ್ಲೆಂಡ್:
ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಫಿಲ್ ಸಾಲ್ಟ್, ಜಾನಿ ಬೆಸ್ಟೊ, ಹ್ಯಾರಿ ಬ್ರೂಕ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟಾಪ್ಲಿ.
ಪಂದ್ಯದ ಸಮಯ: ರಾತ್ರಿ 8 ಗಂಟೆಗೆ