ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಏಷ್ಯಾಕಪ್ ಕ್ರಿಕೆಟ್ ಪಂದ್ಯ ರದ್ದಾಗಬಹುದು ಎಂಬ ಊಹಾಪೋಹಗಳು ತಳ್ಳಿಹಾಕಲ್ಪಟ್ಟಿವೆ. ಆಯೋಜಕರ ಮೂಲಗಳ ಪ್ರಕಾರ, ಪಂದ್ಯ ನಿಗದಿಯಂತೆ ನಡೆಯಲಿದೆ.
ಸೆಪ್ಟೆಂಬರ್ 9ರಿಂದ ಆರಂಭವಾಗುವ ಏಷ್ಯಾಕಪ್ನಲ್ಲಿ, ಎ ಗುಂಪಿನಲ್ಲಿರುವ ಭಾರತ ತನ್ನ ಮೊದಲ ಪಂದ್ಯವನ್ನು ಸೆ.10ರಂದು ಯುಎಇ ವಿರುದ್ಧ ಆಡಲಿದೆ. ಭಾರತ–ಪಾಕಿಸ್ತಾನ ನಡುವಿನ ಪಂದ್ಯ ಸೆ.14ರಂದು ದುಬೈನಲ್ಲಿ ನಡೆಯಲಿದೆ. 2024ರ ಟಿ20 ವಿಶ್ವಕಪ್ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು.
ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ಪಂದ್ಯವನ್ನು ಆಡಬಾರದು ಎಂದು ಸಂಸದರೂ ಸೇರಿದಂತೆ ಹಲವರು ಒತ್ತಡ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಮುಕ್ತಾಯವಾದ ವಿಶ್ವ ಲೆಜೆಂಡ್ಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆಡಿರಲಿಲ್ಲ. ಹೀಗಾಗಿ ಏಷ್ಯಾಕಪ್ನಲ್ಲೂ ಭಾರತ ಹಿಂದೆ ಸರಿಯಬಹುದು ಎಂಬ ಗೊಂದಲಗಳು ಸೃಷ್ಟಿಯಾಗಿತ್ತು.
ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್ನಲ್ಲಿರುವ ನಿಜವಾದ ಸೌಂದರ್ಯ ಹಾಗೂ ಭರವಸೆ ಮೂಡಿಸಿದ ಯಂಗ್ ಇಂಡಿಯಾ ಟೀಮ್
ಪಾಕಿಸ್ತಾನದ ವಿರುದ್ಧ ಭಾರತ ಆಡಬಾರದೆಂದು ರಾಜಕೀಯ ವಲಯದಲ್ಲೂ ಒತ್ತಡವಿದ್ದರೂ, ಏಷ್ಯಾಕಪ್ಗೆ ಹಾಗೂ ಪಾಕಿಸ್ತಾನದ ವಿರುದ್ಧ ಪಂದ್ಯವಾಡಲು ಸರ್ಕಾರದ ಅನುಮತಿ ಈಗಾಗಲೇ ದೊರೆತಿದೆ. ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಭಾರತ ಹಿಂದೆ ಸರಿಯುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಆ.29ರಿಂದ ಸೆ.7ರವರೆಗೆ ಬಿಹಾರದ ರಾಜ್ಗಿರ್ನಲ್ಲಿ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯಿಂದ ಪಾಕಿಸ್ತಾನ ಭದ್ರತೆಯ ಕಾರಣ ನೀಡಿ ಹಿಂದೆ ಸರಿಯಿತು. ಪಾಕಿಸ್ತಾನ ಆಟಗಾರರಿಗೆ ಭಾರತ ಸರ್ಕಾರ ವೀಸಾ ನೀಡಲು ಸಿದ್ಧವಿದ್ದರೂ, ಪಾಕಿಸ್ತಾನ ತಂಡ ಭಾರತ ಪ್ರವಾಸ ನಿರಾಕರಿಸಿತು ಎಂದು ಹಾಕಿ ಇಂಡಿಯಾ ತಿಳಿಸಿದೆ. ಈ ಹಾಕಿ ಟೂರ್ನಿ 2026ರ ವಿಶ್ವಕಪ್ ಅರ್ಹತೆ ಪಡೆಯಲು ಪ್ರಮುಖವಾಗಿದೆ.