ಭಾರತದ ವಿರುದ್ಧದ ಟಿ20 ಸರಣಿಯ ನಿರ್ಣಾಯಕ ಐದನೇ ಪಂದ್ಯದಲ್ಲಿ ಬ್ರ್ಯಾಂಡನ್ ಕಿಂಗ್ (ಅಜೇಯ 85) ಹಾಗೂ ನಿಕೋಲಸ್ ಪೂರನ್ (47) ಅವರ ಸ್ಪೋಟಕ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 8 ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿ 5 ಪಂದ್ಯಗಳ ಸರಣಿಯನ್ನು 3-2 ರಿಂದ ತನ್ನದಾಗಿಸಿಕೊಂಡು ಏಕದಿನ, ಟೆಸ್ಟ್ ಸೋಲಿನ ಸೇಡನ್ನು ತೀರಿಸಿಕೊಂಡಿತು.
ಟೀಂ ಇಂಡಿಯಾ ನೀಡಿದ್ದ 166 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರೋವ್‌ಮನ್ ಪೊವೆಲ್ ಸಾರಥ್ಯದ ವೆಸ್ಟ್ ಇಂಡೀಸ್ 18 ಓವರ್‌ಗಳಲ್ಲಿ ಗೆಲುವನ್ನು ಮುಡಿಗೇರಿಸಿಕೊಂಡಿತು. ಆರಂಭಿಕ ಆಟಗಾರರಾದ ಬ್ರ್ಯಾಂಡನ್ ಕಿಂಗ್ 55 ಎಸೆತಗಳಲ್ಲಿ 6 ಸಿಕ್ಸ್ರರ್ ಹಾಗೂ 5 ಬೌಂಡರಿಯೊಂದಿಗೆ ಅಜೇಯ 85 ರನ್ ಹಾಗೂ ನಿಕೋಲಸ್ ಪೂರನ್ 35 ಚೆಂಡುಗಳಲ್ಲಿ 4 ಭರ್ಜರಿ ಸಿಕ್ಸರ್, 1 ಬೌಂಡರಿಯೊಂದಿಗೆ 47 ರನ್ ಸಿಡಿಸಿ ಜಯದ ರೂವಾರಿಗಳಾದರು.
ಇದಕ್ಕೂ ಮೊದಲು ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು. ಸೂರ್ಯಕುಮಾರ್ ಯಾದವ್ (61; 45ಎ, 4X4, 6X3) ಅವರ ಅರ್ಧ ಶತಕದ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಆತಿಥೇಯ ತಂಡದ ಅಕಿಲ್ ಹುಸೇನ್ ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದರು. ಮೂರನೇ ಓವರ್‌ನಲ್ಲಿ ಅಕಿಲ್ ಬೌಲಿಂಗ್‌ನಲ್ಲಿ ಶುಭಮನ್ ಗಿಲ್ ಎಲ್‌ಬಿ ಬಲೆಗೆ ಬಿದ್ದರು. ಈ ಹಂತದಲ್ಲಿ ಸೂರ್ಯ ಅವರೊಂದಿಗೆ ಜೊತೆಗೂಡಿದ ತಿಲಕ್ ವರ್ಮಾ (27; 18ಎ, 4X3, 6X2) ತಂಡಕ್ಕೆ ತುಸು ಚೇತರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಭಾರತ – ವೆಸ್ಟ್ ಇಂಡೀಸ್ ಐದನೇ ಟಿ20 | ನಿರ್ಣಾಯಕ ಪಂದ್ಯದಲ್ಲಿ ಯಾರ ಮುಡಿಗೆ ಟ್ರೋಫಿ?
ರಾಷ್ಟನ್ ಚೇಸ್ ಎಂಟನೇ ಓವರ್‌ನಲ್ಲಿ ವರ್ಮಾ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ ಸೂರ್ಯ ಮಾತ್ರ ಅಬ್ಬರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 14 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165
(ಸೂರ್ಯ ಕುಮಾರ್ ಯಾದವ್ 61, ತಿಲಕ್ ವರ್ಮಾ 27, ಅಕಿಲ್ ಹುಸೇನ್
24ಕ್ಕೆ2, ಜೇಸನ್ ಹೋಲ್ಡರ್ 36ಕ್ಕೆ2, ರೊಮೆರಿಯೊ ಶೇಫರ್ಡ್ 31ಕ್ಕೆ4)
ವೆಸ್ಟ್ ಇಂಡೀಸ್: 18 ಓವರ್‌ಗಳಳ್ಲಿ 2 ವಿಕೆಟ್ ನಷ್ಟಕ್ಕೆ 171
(ಬ್ರ್ಯಾಂಡನ್ ಕಿಂಗ್ ಅಜೇಯ 85 ಹಾಗೂ ನಿಕೋಲಸ್ ಪೂರನ್ 47 )
ಪಂದ್ಯ ಶ್ರೇಷ್ಠ: ರೊಮೆರಿಯೊ ಶೇಫರ್ಡ್
ಸರಣಿ ಶ್ರೇಷ್ಠ: ನಿಕೋಲಸ್ ಪೂರನ್