ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು ಗೆಲ್ಲುವುದರ ಮೂಲಕ ಜಸ್‌ಪ್ರೀತ್ ಬೂಮ್ರಾ ಸಾರಥ್ಯದ ಭಾರತ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಜಯಗಳಿಸುವುದರೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟೀಂ ಇಂಡಿಯಾ ನೀಡಿದ 186 ರನ್‌ಗಳ ಸವಾಲನ್ನು ಬೆನ್ನಟ್ಟಿದ ಪೌಲ್ ಸ್ಟಿರ್ಲಿಂಗ್ ನೇತೃತ್ವದ ಐರ್ಲೆಂಡ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್‌ಗಳಷ್ಟನ್ನೇ ಗಳಿಸುವುದರೊಂದಿಗೆ 33 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.
ಆರಂಭಿಕ ಆಟಗಾರ ಆಂಡ್ರ್ಯೂ ಬಾಲ್ಬಿರ್ನಿ 72 ರನ್(51 ಎಸೆತ,4 ಸಿಕ್ಸರ್, 5 ಬೌಂಡರಿ) ಬಾರಿಸಿದ್ದನ್ನು ಬಿಟ್ಟರೆ ಉಳಿದವರ್ಯಾರು ಪ್ರತಿರೋಧ ತೋರಲಿಲ್ಲ.
ಈ ಸುದ್ದಿ ಓದಿದ್ದೀರಾ? ಭಾರತ vs ಐರ್ಲೆಂಡ್ ಎರಡನೇ ಟಿ20: ಸರಣಿ ಗೆಲ್ಲುವ ತವಕದಲ್ಲಿರುವ ಬೂಮ್ರಾ ಪಡೆಗೆ ಆರಂಭಿಕ ಆಘಾತ
ಭಾರತದ ಪರ ನಾಯಕ ಜಸ್‌ಪ್ರೀತ್ ಬೂಮ್ರಾ 15/2, ಕನ್ನಡಿಗ ಪ್ರಸಿದ್ಧ ಕೃಷ್ಣ 29/2 ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ 37/2 ವಿಕೆಟ್ ಕಬಳಿಸುವುದರೊಂದಿಗೆ ಗೆಲುವಿನ ಪಾಲುದಾರರಾದರು.
ಋತುರಾಜ್,ರಿಂಕು, ಸಂಜು ಸ್ಯಾಮ್ಸನ್ ಉತ್ತಮ ಆಟ
ಇದಕ್ಕೂ ಮೊದಲು ದಿ ವಿಲೇಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಋತುರಾಜ್ ಸಿಂಗ್(58),ಸಂಜು ಸ್ಯಾಮ್ಸನ್ (40) ಹಾಗೂ ರಿಂಕುಸಿಂಗ್ (38) ರನ್‌ಗಳ ಭರ್ಜರಿ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು.
ಆಕ್ರಮಣಕಾರಿ ಆಟವಾಡಿದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (18) ದೊಡ್ಡ ಹೊಡೆತಕ್ಕೆ ಕೈಹಾಕಿ ನಿರಾಶೆ ಅನುಭವಿಸಿದರು. ಆದರೆ, ಮತ್ತೊಬ್ಬ ಯುವ ಆರಂಭಿಕ ಋತುರಾಜ್ ಗಾಯಕ್ವಾಡ್, 43 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನೊಂದಿಗೆ 58 ರನ್ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿದರು.
ಇನಿಂಗ್ಸ್ ಮಧ್ಯದಲ್ಲಿ ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್, 26 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡದ ರನ್ ಗಳಿಕೆಯ ವೇಗ ಹೆಚ್ಚಿಸಿಕೊಟ್ಟರು. ಅಂತಿಮ ಓವರ್‌ಗಳಲ್ಲಿ ಸ್ಪೋಟಕ ಆಟವಾಡಿದ ರಿಂಕು ಸಿಂಗ್ (21 ಎಸೆತಗಳಲ್ಲಿ 38 ರನ್,3 ಸಿಕ್ಸರ್,2 ಬೌಂಡರಿ) ಮತ್ತು ಶಿವಂ ದುಬೇ (16 ಎಸೆತಗಳಲ್ಲಿಅಜೇಯ 22 ರನ್) ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಐರ್ಲೆಂಡ್ ಪರ ವೇಗಿ ಬ್ಯಾರಿ ಮೆಕಾರ್ತಿ ಎರಡು ವಿಕೆಟ್ ಪಡೆದರು.
ವೇಗವಾಗಿ 38 ರನ್ ಸಿಡಿಸಿದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.