ಏಷ್ಯಾ ಕಪ್ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಅರ್ಧ ಶತಕದ ನೆರವಿನಿಂದ ನೇಪಾಳ ತಂಡದ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯಗಳಿಸುವುದರೊಂದಿಗೆ ಪಾಕಿಸ್ತಾನದ ಜೊತೆ ಸೂಪರ್ ಫೋರ್ಗೆ ಅರ್ಹತೆ ಪಡೆದಿದೆ.
ನೇಪಾಳ ನೀಡಿದ 231 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ 2 ಓವರ್ಗಳಾಗುವಷ್ಟರಲ್ಲೇ ಮಳೆರಾಯನ ಆಗಮನವಾಯಿತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿಯಿತು. ವರುಣ ತಡೆ ನೀಡಿದ ನಂತರ 23 ಓವರ್ಗಳಲ್ಲಿ 145 ರನ್ ನಿಗದಿಪಡಿಸಲಾಯಿತು.
ಬಿರುಸಿನ ಆಟವಾಡಿದ ರೋಹಿತ್ ಶರ್ಮಾ 74(59 ಎಸೆತ, 5 ಸಿಕ್ಸ್, 6 ಫೋರ್) ಹಾಗೂ ಶುಭಮನ್ ಗಿಲ್ 67(62 ಎಸೆತ, 8 ಫೋರ್, 1 ಸಿಕ್ಸ್) ರನ್ ಗಳಿಸಿ 20.1 ಓವರ್ಗಳಲ್ಲಿ ಗುರಿ ಮುಟ್ಟಿ ಭಾರತಕ್ಕೆ ಜಯ ತಂದುಕೊಟ್ಟರು. ಏಷ್ಯಾ ಕಪ್ ಸೂಪರ್ 4ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸೆ.10ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಸುದ್ದಿ ಓದಿದ್ದೀರಾ? ದೇಶ-ದ್ವೇಷ ಮೀರಿ ನಿಂತ ನೀರಜ್ ಚೋಪ್ರಾ – ಭಾರತದ ನಿಜವಾದ ಕ್ರೀಡಾ ಜ್ಯೋತಿ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನಾಯಕ ರೋಹಿತ್ ಪೌದೆಲ್ ನೇತೃತ್ವದ ನೇಪಾಳ ತಂಡ ಸೋಂಪಾಲ್ ಕಾಮಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ 230 ರನ್ಗಳ ಜವಾಬ್ದಾರಿಯುತ ಮೊತ್ತ ಪೇರಿಸಿತು. ಭಾರತದ ಕಳಪೆ ಕ್ಷೇತ್ರ ರಕ್ಷಣೆಯ ನಡುವೆ ನೇಪಾಳ ದಿಟ್ಟ ಹೋರಾಟ ನೀಡಿತು. ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿದ ಕಾರಣ ಭಾರತ ದುಬಾರಿ ಬೆಲೆ ತೆತ್ತಿತು.
ನೇಪಾಳ ಆರಂಭಿಕ 4 ಓವರ್ಗಳಲ್ಲಿ 3 ಕ್ಯಾಚ್ ನೀಡಿತ್ತು. ಆದರೆ ಮೂರು ಕ್ಯಾಚ್ಗಳನ್ನು ಭಾರತದ ಫೀಲ್ಡರ್ಗಳು ಕೈಚೆಲ್ಲಿದರು. ಕುಶಾಲ್ ಭರ್ಟೆಲ್ ಹಾಗೂ ಆಸಿಫ್ ಶೇಕ್ ಜೊತೆಯಾಟ ನೇಪಾಳ ತಂಡಕ್ಕೆ ಉತ್ತಮ ಆರಂಭ ನೀಡಿತು. ಕುಶಾಲ್ ಭರ್ಟೆಲ್ 25 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್ಗೆ ಈ ಜೋಡಿ 65 ರನ್ ಜೊತೆಯಾಟ ನೀಡಿತು. ಇತ್ತ ಆಸೀಫ್ ಶೇಕ್ 58 ರನ್ ಸಿಡಿಸಿ ಔಟಾದರು.
ಆರಂಭಿಕರ ವಿಕೆಟ್ ಪತನದ ಬಳಿಕ ನೇಪಾಳ ದಿಢೀರ್ ಕುಸಿತ ಕಂಡಿತು. ಭೀಮ್ ಶರ್ಕಿ 7, ನಾಯಕ ರೋಹಿತ್ ಪೌದೆಲ್ 5 ಹಾಗೂ ಕುಶಾಲ್ ಮಲ್ಲಾ 2 ರನ್ಗೆ ಪೆವಿಲಿಯನ್ಗೆ ತೆರಳಿದರು. ಗುಲ್ಶನ್ ಜಾ ಹಾಗೂ ದೀಪೇಂದ್ರ ಸಿಂಗ್ ಜೊತೆಯಾಟದಿಂದ ನೇಪಾಳ ಮತ್ತೆ ಚೇತರಿಸಿಕೊಂಡಿತು. ಗುಲ್ಶನ್ ಜಾ 23 ರನ್ ಕಾಣಿಕೆ ನೀಡಿದರು. ದೀಪೇಂದ್ರ ಸಿಂಗ್ 29 ರನ್ ಬಾರಿಸಿದರು.
ಅಂತಿಮ ಹಂತದಲ್ಲಿ ಸೋಂಪಾಲ್ ಕಮಿ ಹೋರಾಟ ನೇಪಾಳ ತಂಡವನ್ನು 200ರ ಗಡಿ ದಾಟಿಸಿತು. ಸೋಂಪಾಲ್ 48 ಪೇರಿಸಿದರು. ಆದರೆ ಸಂದೀಪ್ ಲಮಿಚಾನೆ, ಕರನ್ ಕೆಸಿ ಹಾಗೂ ಲಲಿತ್ ರಾಜಬನ್ಶಿ ಹೋರಾಟ ನೀಡಲಿಲ್ಲ. ಹೀಗಾಗಿ ನೇಪಾಳ ಅಂತಿಮವಾಗಿ 48.2 ಓವರ್ಗಳಲ್ಲಿ 230 ರನ್ ಗಳಿಸಿ ಆಲೌಟ್ ಆಯಿತು.ಭಾರತದ ಪರ ರವೀಂದ್ರ ಜಡೇಜಾ 40/3, ಮೊಹಮ್ಮದ್ ಸಿರಾಜ್ 61/3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ಗಳೆನಿಸಿದರು