ಆರಂಭಿಕ ಆಟಗಾರರಾದ ಶುಭಮನ್ ಗಿಲ್, ಋತುರಾಜ್ ಗಾಯಕ್‌ವಾಡ್ ಅವರ ಆಕರ್ಷಕ ಅರ್ಧ ಶತಕ ಹಾಗೂ ನಾಯಕ ಕೆ ಎಲ್ ರಾಹುಲ್ ಹಾಗೂ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಸಮಯೋಚಿತ ಆಟದಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ನೀಡಿದ 277 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ 48.4 ಓವರ್‌ಗಳಲ್ಲಿ 281 ಗಳಿಸಿ ಜಯ ತನ್ನದಾಗಿಸಿಕೊಂಡಿತು.
ಋತುರಾಜ್ ಗಾಯಕ್‌ವಾಡ್ 77 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 71 ಗಳಿಸಿದರೆ, ಶುಭಮನ್ ಗಿಲ್ 63 ಚೆಂಡುಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 74 ರನ್ ಸ್ಫೋಟಿಸಿದರು.
ಶ್ರೇಯಸ್ ಅಯ್ಯರ್ ಕೇವಲ ಮೂರು ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 18 ರನ್‌ಗಳೊಂದಿಗೆ ಪೆವಿಲಿಯನ್‌ಗೆ ತೆರಳಿದರು.
ರಾಹುಲ್ ಅವರೊಂದಿಗೆ 80 ರನ್‌ಗಳ ಐದನೇ ವಿಕೆಟ್ ಜೊತೆಯಾಟದಲ್ಲಿ ಸೂರ್ಯ ಕುಮಾರ್ ಯಾದವ್ 50(49 ಎಸೆತ, ಐದು ಬೌಂಡರಿ, 1 ಸಿಕ್ಸರ್ ) ರನ್ ಸ್ಫೋಟಿಸಿದರು. ಗೆಲುವಿನವರೆಗೂ ಅಜೇಯರಾಗಿ ಉಳಿದ ನಾಯಕ ಕೆ ಎಲ್ ರಾಹುಲ್ 63 ಚೆಂಡುಗಳಲ್ಲಿ 4 ಬೌಂಡರಿ 1 ಸಿಕ್ಸರ್‌ನೊಂದಿಗೆ 58 ರನ್ ಗಳಿಸಿದರು.
5 ವಿಕೆಟ್ ಕಬಳಿಸಿದ ಶಮಿ
ಇದಕ್ಕೂ ಮೊದಲು ಟಾಸ್ ಗೆದ್ದ ನಾಯಕ ಕೆ ಎಲ್ ರಾಹುಲ್ ಆಸ್ಟ್ರೇಲಿಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 276 ರನ್ ಗಳಿಸಿತು. ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವುದರೊಂದಿಗೆ ಬೃಹತ್ ಮೊತ್ತ ಕಲೆಹಾಕುವ ಕಮಿನ್ಸ್ ಬಳಗಕ್ಕೆ ಅಡ್ಡಿಯಾದರು.
ಆರಂಭದಲ್ಲೇ ವೇಗಿ ಮೊಹಮ್ಮದ್ ಶಮಿ ಮಿಚೆಲ್ ಮಾರ್ಷ್ ಅವರನ್ನು ಮೊದಲ ಓವರ್‌ನಲ್ಲಿ ಪೆವಿಲಿಯನ್ ಕಳುಹಿಸಿದರು. ಈ ವೇಳೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಜೊತೆಗೂಡಿದ ಅನುಭವಿ ಸ್ಟೀವ್ ಸ್ಮಿತ್, ಜವಾಬ್ದಾರಿಯುತ ಆಟವಾಡಿದರು.
ಈ ಜೋಡಿ 90ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿತು. 53 ಎಸೆತಗಳಲ್ಲಿ ಎರಡು ಸಿಕ್ಸರ್‌ನೊಂದಿಗೆ 52 ರನ್ ಸಿಡಿಸಿದ ವಾರ್ನರ್, ಜಡೇಜಾ ಎಸೆತದಲ್ಲಿ ಶುಭ್ಮಮನ್‌ಗೆ ಕ್ಯಾಚ್ ನೀಡಿ ಔಟಾದರು. ಅವರ ಬೆನ್ನಲ್ಲೇ 41 ರನ್ ಗಳಿಸಿದ್ದ ಸ್ಮಿತ್ ಕೂಡಾ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ ಫೈನಲ್ | ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದ ಸಿರಾಜ್
ಮಾರ್ನಸ್ ಲ್ಯಾಬುಶೇನ್ 39 ರನ್ ಗಳಿಸಿ ಔಟಾದರೆ, ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಕ್ಯಾಮರೂನ್ ಗ್ರೀನ್ 31 ರನ್ ಗಳಿಸಿ ರನೌಟ್ ಆದರು. ಈ ನಡುವೆ ಜೋಶ್ ಇಂಗ್ಲಿಸ್ 45 ರನ್ ಕಲೆ ಹಾಕಿದರು.ಅಂತಿಮ ಓವರ್‌ಗಳಲ್ಲಿ ಅಬ್ಬರಿಸಲು ಮುಂದಾದ ಸ್ಟೋಯ್ನಿಸ್, 29 ರನ್ ಗಳಿಸಿ ಶಮಿ ಎಸೆತದಲಿ ಕ್ಲೀನ್ ಬೋಲ್ಡ್ ಆದರು. ಕೊನೆಯ ಹಂತದಲ್ಲಿ ನಾಯಕ ಕಮಿನ್ಸ್ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊಹಮ್ಮದ್ ಶಮಿ 10 ಓವರ್‌ಗಳಲ್ಲಿ 51/5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.