ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್‌ಗಳ ಬೃಹತ್ ಗೆಲುವು ಸಾಧಿಸಿ ಭರ್ಜರಿ ಪ್ರಾಬಲ್ಯ ಮೆರೆದಿದೆ. ನ್ಯೂ ಚಂಡೀಗಢ ಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಂಪೂರ್ಣ ಪಾರುಪತ್ಯ ಸಾಧಿಸಿದ ಭಾರತ ತಂಡವು, ಪ್ರವಾಸಿಗರನ್ನು ಅಕ್ಷರಶಃ ಧೂಳೀಪಟ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ 127 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 564 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಶುಭಮನ್ ಗಿಲ್ (126 ರನ್, 177 ಎಸೆತ, 15 ಬೌಂಡರಿ) ಹಾಗೂ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ (100 ರನ್, 165 ಎಸೆತ, 11 ಬೌಂಡರಿ) ಅವರ ಆಕರ್ಷಕ ಶತಕಗಳು ಭಾರತದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದವು.
ಯುವ ಆಟಗಾರ ಸಾಯಿ ಸುದರ್ಶನ್ (81 ರನ್) ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ (81 ರನ್, 3 ಸಿಕ್ಸರ್) ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 52 ರನ್ ಗಳಿಸಿ ನೆರವಾದರು. ಅಫ್ಘಾನ್ ಪರ ವೇಗಿ ಮೊಹಮ್ಮದ್ ಸಲೀಂ (140 ಕ್ಕೆ 6 ವಿಕೆಟ್) ಯಶಸ್ವಿ ಬೌಲರ್ ಎನಿಸಿದರೂ ಭಾರತದ ರನ್ ಪ್ರವಾಹವನ್ನು ತಡೆಯಲು ಸಾಧ್ಯವಾಗಲಿಲ್ಲ.
ಮುಂದೆ ಓದಿ? ಏಷ್ಯನ್ ಗೇಮ್ಸ್, ಯುಕೆ ಪ್ರವಾಸಕ್ಕೆ ಶ್ರೇಯಸ್ ಅಯ್ಯರ್ ನಾಯಕ; ವೈಭವ್ ಸೂರ್ಯವಂಶಿಗೆ ಸ್ಥಾನ
ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡವು ಕೇವಲ 152 ರನ್‌ಗಳಿಗೆ ಸರ್ವಪತನ ಕಂಡಿತು. ರೆಹಮತ್ ಶಾ (60 ರನ್) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ ಭಾರತೀಯ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ವಿಶೇಷವೆಂದರೆ, ಭಾರತದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಮೊದಲ ಪಂದ್ಯದಲ್ಲೇ ಮಾಂತ್ರಿಕ ದಾಳಿ ಸಂಘಟಿಸಿದರು. ಕೇವಲ 33 ರನ್ ನೀಡಿ 6 ವಿಕೆಟ್ (22 ಓವರ್, 10 ಮೇಡನ್) ಕಬಳಿಸುವ ಮೂಲಕ ಅಫ್ಘಾನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅವರಿಗೆ ಉತ್ತಮ ಸಾಥ್ ನೀಡಿದ ವೇಗಿ ಪ್ರಸಿದ್ಧ್ ಕೃಷ್ಣ 37 ರನ್ ನೀಡಿ 3 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ 412 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿ ‘ಫಾಲೋ-ಆನ್’ಗೆ ಸಿಲುಕಿದ ಅಫ್ಘಾನಿಸ್ತಾನ ತಂಡವು, ಎರಡನೇ ಇನಿಂಗ್ಸ್ ನಲ್ಲೂ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತೀಯ ಬೌಲರ್‌ಗಳ ನಿಖರ ಹಾಗೂ ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಪಡೆ, ಕೇವಲ 112 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಭಾರತವು ಇನಿಂಗ್ಸ್ ಹಾಗೂ 300 ರನ್‌ಗಳ ಬೃಹತ್ ಅಂತರದ ಐತಿಹಾಸಿಕ ಜಯವನ್ನು ತನ್ನದಾಗಿಸಿಕೊಂಡಿತು.





