ಇಡೀ ಟೂರ್ನಿಯಲ್ಲಿ ಪ್ರತಿಯೊಬ್ಬ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದರು. ಕಡೆಗಣಿಸುವಂತಹ ಆಟವನ್ನು ಯಾವೊಬ್ಬ ಆಟಗಾರರು ಆಡಲಿಲ್ಲ. ಟ್ರೋಫಿ ಭಾರತದ ಮಡಿಲು ಸೇರಲು ಎಲ್ಲರೂ ಕಾರಣಕರ್ತರಾದರು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. 12 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಭಾರತೀಯ ಆಟಗಾರರು ಪಾರಮ್ಯ ಮೆರೆದಿದ್ದಾರೆ. ಟೀಂ ಇಂಡಿಯಾ ಮೂರನೇ ಬಾರಿ ಕಪ್ ಗೆಲ್ಲುವ ಮೂಲಕ ಎರಡು ಬಾರಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾದ ದಾಖಲೆಯನ್ನು ಸರಿಗಟ್ಟಿದೆ. ಆಸ್ಟ್ರೇಲಿಯಾ ಈ ಮೊದಲು 2006 ಮತ್ತು 2009ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಭಾರತ 2002ರಲ್ಲಿ ಶ್ರೀಲಂಕಾದ ಜೊತೆ ಸೌರವ್ ಗಂಗೂಲಿ ನಾಯಕತ್ವದಲ್ಲಿ ಜಂಟಿಯಾಗಿ, 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಹಾಗೂ ಪ್ರಸ್ತುತ 2025ರಲ್ಲಿ ರೋಹಿತ್ ಶರ್ಮಾ ಬಳಗದಲ್ಲಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಇಡೀ ಟೂರ್ನಿಯಲ್ಲಿ ಪ್ರತಿಯೊಬ್ಬ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದರು. ಕಡೆಗಣಿಸುವಂತಹ ಆಟವನ್ನು ಯಾವೊಬ್ಬ ಆಟಗಾರರು ಆಡಲಿಲ್ಲ. ಟ್ರೋಫಿ ಭಾರತದ ಮಡಿಲು ಸೇರಲು ಎಲ್ಲರೂ ಕಾರಣಕರ್ತರಾದರು.
ಫೈನಲ್‌ನಲ್ಲಿ ನಾಯಕ ರೋಹಿತ್ ಶರ್ಮಾ, ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಪಾರಮ್ಯ ಮೆರೆದರೆ, ಸೆಮಿಫೈನಲ್‌ನಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಅದ್ಭುತ ಆಟವಾಡಿದರು. ಆರಂಭಿಕ ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜ ಸೇರಿದಂತೆ ಎಲ್ಲ ಆಟಗಾರರು ನಿರೀಕ್ಷೆಗೂ ಮೀರಿ ತಮ್ಮ ಸಾಮರ್ಥ್ಯ ತೋರಿದರು.
ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದರೂ ರಾಜತಾಂತ್ರಿಕ ಕಾರಣದಿಂದ ಭಾರತದ ಪಂದ್ಯಗಳೆಲ್ಲವೂ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ದುಬೈನ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಮ್ಯಾಜಿಕ್ ಕಾಣುತ್ತಿತ್ತು. ವೇಗಿಗಳಿಗಿಂತ ಸ್ಪಿನ್ನರ್‌ಗಳೆ ಇಲ್ಲಿನ ಪಿಚ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ವಿಶ್ವ ದಾಖಲೆಯನ್ನೆ ನಿರ್ಮಿಸಿದರು. ಐಸಿಸಿ ಟೂರ್ನಮೆಂಟ್‌ನಲ್ಲಿ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ದಾಖಲೆಯನ್ನು ಸ್ಪಿನ್ನರ್‌ಗಳು ಸೃಷ್ಟಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಸ್ಪಿನ್ನರ್‌ಗಳು ಒಟ್ಟು 73 ಓವರ್‌ಗಳನ್ನು ಬೌಲಿಂಗ್ ಮಾಡಿದರು. ಇದಕ್ಕೂ ಮೊದಲು, ಹಿಂದಿನ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಪಿನ್ನರ್‌ಗಳು 65.1 ಓವರ್‌ಗಳನ್ನು ಬೌಲ್ ಮಾಡಿದ್ದರು.
ತನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ. ಇದಲ್ಲದೆ ಐಸಿಸಿ ಟೂರ್ನಿಗಳಲ್ಲಿ ತಾನೊಬ್ಬ ಸಮರ್ಥ ನಾಯಕ ಎಂದು ತೋರಿಸಿಕೊಟ್ಟಿದ್ದಾರೆ. ರೋಹಿತ್ ಶರ್ಮಾ ನೇತೃತ್ವದಲ್ಲಿ 2023 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಲೀಗ್ ಹಂತ 9 ಪಂದ್ಯಗಳನ್ನು ಗೆದ್ದಿತ್ತು. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿತ್ತು. ನಂತರದಲ್ಲಿ 2024 ರಲ್ಲಿ ವೆಸ್ಟ್ ಇಂಡಿಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಎಲ್ಲ 9 ಪಂದ್ಯಗಳನ್ನು ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಈ ಸುದ್ದಿ ಓದಿದ್ದೀರಾ? ಭಾರತದ ವಿರುದ್ಧ ಸೋಲು: ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸ್ಟೀವ್ ಸ್ಮಿತ್
ಈಗ ಪಾಕಿಸ್ತಾನ ಆಯೋಜಿಸಿದ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಲೀಗ್‌ನ ಎಲ್ಲ 3 ಪಂದ್ಯಗಳನ್ನು ಜಯಿಸಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಫೈನಲ್‌ನಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಕೊಂಡಿದೆ. ಐಸಿಸಿ ಏಕದಿನ ವಿಶ್ವಕಪ್‌ನ 10 ಪಂದ್ಯ, ಟಿ20 ವಿಶ್ವಕಪ್‌ನ 9 ಪಂದ್ಯ, ಚಾಂಪಿಯನ್ಸ್ ಟ್ರೋಫಿಯ ಎಲ್ಲ 5 ಪಂದ್ಯಗಳನ್ನು ರೋಹಿತ್ ಶರ್ಮಾ ನೇತೃತ್ವದಲ್ಲೇ ಭಾರತ ಜಯಗಳಿಸಿದೆ. ಈ ಮೂಲಕ ಐಸಿಸಿ ಟೂರ್ನಿಯ ಒಟ್ಟು 24 ಪಂದ್ಯಗಳ ಪೈಕಿ 23 ಪಂದ್ಯಗಳನ್ನು ರೋಹಿತ್ ಜಯಗಳಿಸಿದ್ದಾರೆ. ಇದರೆಲ್ಲದರ ನಡುವೆ ಬೌಲಿಂಗ್‌ನ ಪ್ರಬಲ ಅಸ್ತ್ರ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯ ನಡುವೆಯೂ ಟೀಂ ಇಂಡಿಯಾ ಕಪ್ ಜಯಿಸಿರುವುದು ತಂಡಕ್ಕೆ ಮತ್ತಷ್ಟು ಹುರುಪು ತಂದಿದೆ.
ಟೀಂ ಇಂಡಿಯಾದ ಈ ಗೆಲುವು ಹಿಂದಿನ ಮುಖ್ಯಘಟ್ಟಗಳ ಸೋಲಿನ ಕಹಿ ನೆನಪುಗಳನ್ನು ಮರೆಸಿದೆ. 2023ರ ಏಕದಿನ ವಿಶ್ವಕಪ್, 2024ರ ಟೆಸ್ಟ್ ವಿಶ್ವಚಾಂಪಿಯನ್‌ಷಿಪ್ ಹಿನ್ನಡೆ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು ಆಟಗಾರರಿಗೆ ನೋವು ತರಿಸಿತ್ತು. ಐಸಿಸಿ ಟೂರ್ನಿಗಳಲ್ಲಿ ಚಾಂಪಿಯನ್ ಆಗುವುದನ್ನೇ ರೂಢಿಮಾಡಿಕೊಂಡಿರುವ ಆಸ್ಟ್ರೇಲಿಯಾ 2023ರ ನವೆಂಬರ್ 23 ರಂದು ಅಹಮದಾಬಾದಿನ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ರೋಹಿತ್ ಶರ್ಮಾ ಬಳಗವನ್ನು ಸೋಲಿಸಿತ್ತು. 12 ವರ್ಷಗಳ ನಂತರ ಭಾರತಕ್ಕೆ ಮತ್ತೆ ವಿಶ್ವಕಪ್ ಒಲಿಯಬಹುದೆಂಬ ನಿರೀಕ್ಷೆಯಲ್ಲಿದ್ದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಳಗಾದರು. ಒಂದೂವರೆ ತಿಂಗಳಿನಿಂದ ನಡೆದ ಈ ಟೂರ್ನಿಯಲ್ಲಿ ಭಾರತವು ಲೀಗ್ ಹಂತದ ಎಲ್ಲ ಒಂಬತ್ತು ಪಂದ್ಯಗಳು ಮತ್ತು ನ್ಯೂಜಿಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಫೈನಲ್ ಸೋಲು ಮಾತ್ರ ಯಾರೊಬ್ಬರಿಗೂ ಅರಗಿಸಿಕೊಳ್ಳಲಾಗಲಿಲ್ಲ. ಈ ನೋವಿಗೆ ಒಂದಿಷ್ಟು ಸಮಾಧಾನ ನೀಡಿದ್ದು ವೆಸ್ಟ್ ಇಂಡೀಸ್‌ನ ಬಾರ್ಬಾಡೋಸ್‌ನಲ್ಲಿ ಟಿ-20 ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ.
ಇದನ್ನು ಓದಿದ್ದೀರಾ?: ಚಾಂಪಿಯನ್ಸ್ ಟ್ರೋಫಿ ಫೈನಲ್: ನ್ಯೂಜಿಲ್ಯಾಂಡ್ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಹಲವು ಹೊಸ ಪ್ರತಿಭೆಗಳು ಅಸಾಧಾರಣ ಪ್ರತಿಭೆ ತೋರಿದರೆ, ದಿಗ್ಗಜ ತಂಡಗಳು ಮುಗ್ಗರಿಸಿವೆ. ಅಪ್ಘಾನಿಸ್ತಾನದ 23 ವರ್ಷದ ಇಬ್ರಾಹಿಂ ಜದ್ರಾನ್ ಎನ್ನುವ ಯುವ ಆಟಗಾರ ಇಂಗ್ಲೆಂಡ್ ಎದುರು ಭರ್ಜರಿ 177 ರನ್ ಬಾರಿಸುವ ಮೂಲಕ ಸೀಮಿತ ಓವರ್‌ನ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟದ ಭರವಸೆ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಅನ್ನು 8 ರನ್‌ಗಳ ಅಂತರದಿಂದ ಅಫ್ಘಾನ್ ಪರಾಭವಗೊಳಿಸಿತ್ತು. ಬಾಂಗ್ಲಾದ ಉದಯೋನ್ಮುಖ ಆಟಗಾರ ತೌಹಿದ್ ಹೃದಯ್ ಭಾರತದ ವಿರುದ್ಧ ಶತಕ ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ. ಟೀಂ ಇಂಡಿಯಾದ ಎದುರು ಬಾಂಗ್ಲಾ ಸೋತರೂ ಅತ್ಯುತ್ತಮ ಪ್ರತಿರೋಧ ತೋರಿತ್ತು. ಒಟ್ಟಿನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಒಂದಿಷ್ಟು ಹೊಸ ಮುಖಗಳಿಗೆ ಕ್ರಿಕೆಟ್ ಭವಿಷ್ಯದ ವೇದಿಕೆ ಕಲ್ಪಿಸಿಕೊಟ್ಟಿದೆ.