ನಾಯಕ ಸುನಿಲ್ ಛೆಟ್ರಿ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ ಗಳಿಸಿದ ಗೋಲುಗಳ ನೆರವಿನಿಂದ ಭಾರತ ತಂಡ, ಇಂಟರ್‌ಕಾಂಟಿನೆಂಟಲ್ ಕಪ್ 2023 ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಭುವನೇಶ್ವರದಲ್ಲಿರುವ ಕಳಿಂಗ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರೆದುರು ನಡೆದ ಫೈನಲ್ ಹೋರಾಟದಲ್ಲಿ ಭಾರತ, ಇಗೋರ್ ಸ್ಟಿಮಾಕ್ ಕೋಚ್ ಆಗಿರುವ ಲೆಬನಾನ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಚಾಂಪಿಯನ್ ಆಯಿತು. ಈ ಗೆಲುವಿನೊಂದಿಗೆ ಫಿಫಾ ರ‍್ಯಾಂಕಿಂಗ್‌ನಲ್ಲಿ ಭಾರತ ಮೊದಲ ಬಾರಿಗೆ 98ನೇ ಸ್ಥಾನಕ್ಕೇರಿದೆ.
ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಮೊದಲಾರ್ಧ ಗೋಲು ರಹಿತವಾಗಿ ಕೊನೆಗೊಂಡಿತ್ತು. ದ್ವಿತಿಯಾರ್ಧದ ಮೊದಲ ನಿಮಿಷದಲ್ಲೇ (46) ನಾಯಕ ಸುನಿಲ್ ಛೆಟ್ರಿ ಗೋಲಿನ ಮೂಲಕ ಭಾರತ ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ಪಂದ್ಯದಲ್ಲಿ ಪೂರ್ಣ ಹಿಡಿತ ಸಾಧಿಸಿದ ಭಾರತ, 65ನೇ ನಿಮಿಷದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಗೋಲಿನ ಮೂಲಕ ಮುನ್ನಡೆಯನ್ನು 2-0ಗೆ ಏರಿಸಿತು.
80ನೇ ನಿಮಿಷದಲ್ಲಿ ಲೆಬನಾನ್ ತಂಡದ ಪಾಲಿಗೆ ಗೋಲು ಗಳಿಸುವ ಉತ್ತಮ ಅವಕಾಶ ನಿರ್ಮಾಣವಾಗಿತ್ತು. ಆದರೆ ಲೆಫ್ಟ್ ವಿಂಗ್‌ನಿಂದ ದೊರೆತ ಕ್ರಾಸ್‌ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಹಸನ್ ಮಾಟೌಕ್ ವಿಫಲವಾದರು.
ಯುವ ಆಟಗಾರರನ್ನು ಒಳಗೊಂಡ ಲೆಬನಾನ್ ಮತ್ತು ಭಾರತ ತಂಡಗಳ ನಡುವೆ ಟೂರ್ನಿಯ ಗುಂಪು ಹಂತದಲ್ಲಿ ನಡೆದಿದ್ದ ಪಂದ್ಯ, ಗೋಲು ರಹಿತ ಡ್ರಾದಲ್ಲಿ ಅಂತ್ಯಗೊಂಡಿತ್ತು.
ಭಾರತದ ಸಾರ್ವಕಾಲಿಕ ಗರಿಷ್ಠ ಗೋಲು ಸ್ಕೋರರ್ ಆಗಿರುವ ಸುನೀಲ್ ಛೇಟ್ರಿ, ಭಾನುವಾರ ಲೆಬನಾನ್ ವಿರುದ್ಧ 87ನೇ ಅಂತಾರಾಷ್ಟ್ರೀಯ ಗೋಲು ದಾಖಲಿಸಿ ಮಿಂಚಿದರು.
2021ರಲ್ಲಿ ಎಸ್‌ಎಎಫ್‌ಎಫ್ (ಸ್ಯಾಫ್) ಚಾಂಪಿಯನ್‌ಶಿಪ್ ಗೆಲುವಿನ ಬಳಿಕ ಭಾರತೀಯ ಫುಟ್‌ಬಾಲ್ ತಂಡ ಗೆಲ್ಲುತ್ತಿರುವ ಮೊದಲ ಅಂತಾರಾಷ್ಟ್ರೀಯ ಟ್ರೋಫಿ ಇದಾಗಿದೆ.