ಐಪಿಎಲ್ 16ನೇ ಆವೃತ್ತಿಯಲ್ಲಿ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರದ ಮೊದಲ ಪಂದ್ಯದಲ್ಲಿ ಆರ್ಸಿಬಿ ಸವಾಲನ್ನು ಎದುರಿಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.
ಏಪ್ರಿಲ್ 10, ಸೋಮವಾರ ನಡೆದಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಅಂತಿಮ ಎಸೆತದಲ್ಲಿ ರೋಚಕ ಸೋಲು ಕಂಡಿತ್ರು.
ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಡುಪ್ಲೆಸಿಸ್ ಪಡೆ , ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಆದರೆ ಆ ನಂತರದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಗೆಲುವಿನ ಒತ್ತಡ ಮತ್ತು ಹ್ಯಾಟ್ರಿಕ್ ಸೋಲಿನ ಮುಖ ಭಂಗ ತಪ್ಪಿಸಿಕೊಳ್ಳಬೇಕಾದ ಒತ್ತಡದಲ್ಲಿದೆ ಆರ್ಸಿಬಿ.
ಮತ್ತೊಂದೆಡೆ ಐಪಿಎಲ್ 16ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಖಾತೆ ತೆರೆಯಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕ ಡೇವಿಡ್ ವಾರ್ನರ್ ಅವರನ್ನೇ ಬಹುತೇಕ ನೆಚ್ಚಿಕೊಂಡಿದೆ. ಕಳೆದ 4 ಪಂದ್ಯಗಳಲ್ಲಿ ವಾರ್ನರ್ ಕ್ರಮವಾಗಿ 56, 37, 65, 51 ರನ್ಗಳಿಸುವ ಮೂಲಕ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ, ತಂಡದ ಇತರ ಆಟಗಾರರು ಕಪ್ತಾನನಿಗೆ ಸಾಥ್ ನೀಡುತ್ತಿಲ್ಲ. ಪೃಥ್ವಿ ಶಾ ಮತ್ತು ಲಲಿತ್ ಯಾದವ್ ಬ್ಯಾಟ್ನಿಂದ ಇನ್ನೂ ದೊಡ್ಡ ಇನ್ನಿಂಗ್ಸ್ ಮೂಡಿಬಂದಿಲ್ಲ.
ಲಕ್ನೋ vs ಪಂಜಾಬ್
ಶನಿವಾರದ ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.
ತವರು ಮೈದಾನ ಏಕನಾ ಸ್ಟೇಡಿಯಂನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಲಕ್ನೋ ಪಡೆ ಇಂದಿನ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಮೂರು ಗೆಲುವು ಕಂಡಿರುವ ಲಕ್ನೋ 6 ಅಂಕಗಳೊಂದಿಗೆ ರಾಜಸ್ಥಾನ ರಾಯಲ್ಸ್ ಜೊತೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ.
ಮತ್ತೊಂದೆಡೆ ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯವನ್ನಾಡಿದ್ದ ಪಂಜಾಬ್ ಕೇವಲ ಒಂದೇ ದಿನದ ಅಂತರದಲ್ಲಿ ಮತ್ತೊಂದು ಸವಾಲಿಗೆ ಸಜ್ಜಾಗಬೇಕಿದೆ.
ತವರು ಮೊಹಾಲಿಯಲ್ಲಿ ಹಾಲಿ ಚಾಂಪಿಯನ್ನರಿಗೆ ಶರಣಾಗಿದ್ದ ಶಿಖರ್ ಧವನ್ ಪಡೆ 4 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಮತ್ತು ಸೋಲು ಕಂಡಿದೆ.