ತವರಿನಲ್ಲಿ ಮೊದಲ ಗೆಲುವು ದಾಖಲಿಸಿ ಹುಮ್ಮಸ್ಸಿನಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‌ಗಳ ಮುಖಭಂಗ ಅನುಭವಿಸಿತು.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನೀಡಿದ 205 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ವರುಣ್ ಚಕ್ರವರ್ತಿ,ಸುನಿಲ್ ನರೈನ್ ಹಾಗೂ ಸುಯಶ್ ಶರ್ಮಾ ಅವರ ಅಮೋಘ ಬೌಲಿಂಗ್ ದಾಳಿಗೆ ಕುಸಿದು 17.4 ಓವರ್‌ಗಳಲ್ಲಿ 123 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ನಿತೀಶ್ ರಾಣಾ ಪಡೆಗೆ ಮೊದಲ ಗೆಲುವಿನ ಉಡುಗೊರೆ ನೀಡಿತು.
ಆರಂಭದಲ್ಲಿ ಉತ್ಸಾಹದೊಂದಿಗೆ ಬ್ಯಾಟಿಂಗ್ ಆರಂಭಿಸಿದ ನಾಯಕ ಫಾಫ್ ಡುಪ್ಲೆಸಿಸ್ 12 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿಯೊಂದಿಗೆ 22 ಬಾರಿಸಿದರೂ ವರುಣ್ ಚಕ್ರವರ್ತಿ ಆಘಾತ ನೀಡಿದರು. ಇತ್ತ 21 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ಸುನೀಲ್ ನರೈನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಪ್ರಮುಖ ಬ್ಯಾಟರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ಅವರು ಕೆಕೆಆರ್ ಬೌಲರ್‌ಗಳ ದಾಳಿಗೆ ಒಬ್ಬರ ಹಿಂದೆ ಒಬ್ಬರು ಪೆಲಿಯನ್ ಕಡೆ ಹೆಜ್ಜೆ ಹಾಕಿದರು.
ವರುಣ್ ಚಕ್ರವರ್ತಿ 15/4, ಸುಯೇಶ್ ಶರ್ಮಾ 30/3, ಸುನಿಲ್ ನರೈನ್ 16/2 ಹಾಗೂ ಶಾರ್ಧೂಲ್ ಠಾಕೂರ್ 15/1 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
ಈ ಮೊದಲು ಟಾಸ್ ಸೋತ ಕೆಕೆಆರ್ ನಾಲ್ಕು ಓವರ್‌ಗಳಾಗುವಷ್ಟರಲ್ಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.ಆರಂಭಿಕ ಆಟಗಾರ ರಹ್ಮಾಮಾನುಲ್ಲಾ ಮಾತ್ರ ಬ್ಯಾಟ್ ಬೀಸುತ್ತಿದ್ದರೆ, ನಾಯಕ ನಿತೀಶ್ ರಾಣಾ,ಆಂಡ್ರೆ ರಸೆಲ್ ಸೇರಿ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್ ಸೇರುತ್ತಿದ್ದರು.
ಹನ್ನೆರಡನೇ ಓವರ್‌ನಲ್ಲಿ 44 ಎಸೆತಗಳಲ್ಲಿ 57 ರನ್ ಗಳಿಸಿ ರಹ್ಮಾಮಾನುಲ್ಲಾ ಔಟಾದ ನಂತರ ಸ್ಫೋಟಕ ಆಟವನ್ನು ಆರಂಭಿಸಿದವರು ಆಲ್‌ರೌಂಡರ್ ಶಾರ್ದೂಲ್ ಠಾಕೂರ್. ಶಾರ್ದೂಲ್‌ಗೆ ತಾಳ್ಮೆಯ ಆಟವಾಡಿ ರಿಂಕು ಸಿಂಗ್ ಜೊತೆಯಾದರು.
ಕೇವಲ 29 ಚಂಡುಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಆಕರ್ಷಕ ಬೌಂಡರಿಗಳ ಮೂಲಕ 69 ರನ್ ಸ್ಫೋಟಿಸಿದರು. ಇವರಿಬ್ಬರು 45 ಚಂಡುಗಳಲ್ಲಿ 103 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 204 ರನ್‌ಗೆ ಕೊಂಡೊಯ್ದರು.
ರಿಂಕು ಸಿಂಗ್ ಕೂಡ 33 ಎಸೆತಗಳಲ್ಲಿ 2 ಬಾಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ 46 ರನ್ ಗಳಿಸಿದರು. ಆರ್‌ಸಿಬಿ ಪರ ಕರಣ್ ಶರ್ಮಾ , ಡೇವಿಡ್ ವಿಲ್ಲಿ ತಲಾ 2 ವಿಕೆಟ್ ಪಡೆದರೆ, ಮೈಕಲ್ ಬ್ರೇಸ್‌ವೆಲ್, ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.