- ರನೌಟ್ ತಪ್ಪಿಸಿದ ಮತೀಶ ಪತಿರಾನ ವಿರುದ್ಧ ಗರಂ ಆದ ಕೂಲ್ ಕ್ಯಾಪ್ಟನ್
- ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ
ಕ್ರಿಕೆಟ್ ಮೈದಾನದಲ್ಲಿ ಎಂ ಎಸ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಚಿರಪರಿಚಿತ. ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ, ಗೆದ್ದಾಗ ಅತಿಯಾಗಿ ಸಂಭ್ರಮಿಸಿದ-ಸೋತಾಗ ನಿರಾಸೆ ವ್ಯಕ್ತಪಡಿಸದ ಧೋನಿ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚು.
ಧೋನಿ ತಾಳ್ಮೆ ಕಳೆದುಕೊಳ್ಳುವುದು ತುಂಬಾ ವಿರಳ. ಆಟದ ವೇಳೆ ಸಹ ಆಟಗಾರರ ಮೇಲೆ ಧೋನಿ ಕೂಗಾಡುವುದು ಅತ್ಯಪರೂಪ. ಆದರೆ 2019ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲಿ ನೋ ಬಾಲ್ ವಿವಾದವೊಂದರಲ್ಲಿ ಪಂದ್ಯ ನಡೆಯುತ್ತಿರುವ ಮಧ್ಯೆಯೇ ಮೈದಾನ ಪ್ರವೇಶಿಸಿದ್ದ ಎಸಿಎಸ್‌ಕೆ ನಾಯಕ ಧೋನಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದು ಭಾರೀ ಸುದ್ದಿಯಾಗಿತ್ತು.
ಗುರುವಾರ ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಸಹ ಆಟಗಾರರ ಮೇಲೆ ಕೋಪಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಮತೀಶ ಪತಿರಾನ ಅವರು ಶಿಮ್ರಾನ್ ಹೆಟ್ಮೆಯರ್‌ಗೆ ಬೌಲಿಂಗ್ ಮಾಡುತ್ತಿದ್ದರು. ನಿಧಾನಗತಿಯ ಬೌನ್ಸರ್ ಅನ್ನು ಅಂದಾಜಿಸುವಲ್ಲಿ ವಿಫಲರಾದ ಹೆಟ್ಮೆಯರ್ ದೇಹಕ್ಕೆ ತಗುಲಿದ ಚೆಂಡು ನೇರವಾಗಿ ಕೀಪರ್ ಧೋನಿಯ ಕೈ ಸೇರಿತ್ತು. ಈ ವೇಳೆ ಬ್ಯಾಟರ್ ರನ್ ಗಳಿಸಲು ಪ್ರಯತ್ನಿಸಿದರು. ರನೌಟ್‌ಗಾಗಿ ಧೋನಿ ಚೆಂಡನ್ನು ನಾನ್ ಸ್ಟ್ರೈಕರ್ ಕಡೆಗೆ ಎಸೆದರು. ಆದರೆ ಬೌಲರ್ ಪತಿರಾನ ಪಿಚ್ ಮಧ್ಯಭಾಗದಲ್ಲಿ ನಿಂತಿದ್ದ ಕಾರಣ ಚೆಂಡು ಸ್ಟಂಪ್‌ಗೆ ತಾಗಲಿಲ್ಲ. ರನೌಟ್‌ಗೆ ಬಲಿಯಾಗಬೇಕಿದ್ದ ಹೆಟ್ಮೆಯರ್‌ಗೆ ಪತಿರಾನ ʻಜೀವದಾನʼ ನೀಡಿದ್ದರು. ಇದರಿಂದ ಕೋಪಗೊಂಡ ಧೋನಿ, ಪತಿರಾನ ಅವರತ್ತ ಕೋಪದಿಂದ ಕೂಗಿದರು.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಕೆಕೆಆರ್ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ಆರ್‌ಸಿಬಿ
ಇದೇ ಪಂದ್ಯದ ಅಂತಿಮ ಎಸೆತದಲ್ಲಿ ರಾಜಸ್ಥಾನ ಬ್ಯಾಟರ್‌ಗಳು ಮೂರು ರನ್ ಗಳಿಸಿದ್ದರು. ಆದರೆ ಈ ವೇಳೆ ಲೆಗ್ ಸೈಡ್‌ನಲ್ಲಿ ಕ್ಷೇತ್ರರಕ್ಷಣೆಯಲ್ಲಿದ್ದ ಶಿವಂ ದುಬೆ ಚೆಂಡನ್ನು ಪಡೆದು ಕ್ಷಿಪ್ರವಾಗಿ ಥ್ರೋ ಮಾಡಲು ವಿಫಲರಾದರು. ರನೌಟ್ ಅವಕಾಶ ತಪ್ಪಿದ ಕಾರಣ ಕೂಲ್ ಕ್ಯಾಪ್ಟನ್ ಧೋನಿ, ದುಬೆ ವಿರುದ್ಧ ʻಗರಂʼ ಆದರು.