ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭದ ದಿನಾಂಕವನ್ನು ಘೋಷಿಸಲಾಗಿದೆ.
ಮಾರ್ಚ್ 22ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು, ಲೋಕಸಭಾ ಚುನಾವಣೆಯ ಹೊರತಾಗಿಯೂ ಈ ವರ್ಷದ ಸಂಪೂರ್ಣ ಪಂದ್ಯಗಳು ಭಾರತದಲ್ಲಿಯೇ ನಡೆಯಲಿವೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗಳು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಐಪಿಎಲ್ 17ನೇ ಆವೃತ್ತಿಯ ವೇಳಾಪಟ್ಟಿಯನ್ನು ಇನ್ನು ಪ್ರಕಟಿಸಿಲ್ಲ.
ಮೊದಲು 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ನಂತರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಚುನಾವಣಾ ದಿನಾಂಕದ ಘೋಷಣೆಯ ನಂತರ ಪ್ರಕಟಿಸಲಾಗುವುದು ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ದಿನಾಂಕವನ್ನು ಮುಂದಿನ ತಿಂಗಳ ಆರಂಭದಲ್ಲಿ ಘೋಷಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
“ಟೂರ್ನಿಯನ್ನು ಮಾರ್ಚ್ 22ರಂದು ಆರಂಭಿಸಲು ಎದುರು ನೋಡುತ್ತಿದ್ದು,ನಾವು ಸರ್ಕಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಆರಂಭದ ವೇಳಾಪಟ್ಟಿಯನ್ನು ಮೊದಲು ಬಿಡುಗಡೆ ಮಾಡುತ್ತೇವೆ. ಟೂರ್ನಿಯ ಪೂರ್ಣ ವೆಳಾಪಟ್ಟಿ ಭಾರತದಲ್ಲಿಯೇ ನಡೆಯಲಿದೆ”ಎಂದು ಧುಮಾಲ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಯುಕ್ತ 2009ರಲ್ಲಿ ಮಾತ್ರ ಪೂರ್ಣ ಟೂರ್ನಿ ವಿದೇಶದಲ್ಲಿ(ದಕ್ಷಿಣ ಆಫ್ರಿಕಾ) ನಡೆದಿತ್ತು. 2014ರ ಟೂರ್ನಿಯ ಭಾಗಶಃ ಪಂದ್ಯಗಳು ಯುಎಇನಲ್ಲಿ ನಡೆದಿದ್ದವು. 2019ರಲ್ಲಿ ಚುನಾವಣೆಯ ಹೊರತಾಗಿಯೂ ಟೂರ್ನಿ ಭಾರತದಲ್ಲಿ ನಡೆದಿದ್ದವು.
ಐಪಿಎಲ್ ಪಂದ್ಯಗಳು ಮುಗಿದ ಕೆಲವು ದಿನಗಳಲ್ಲಿಯೇ ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ.
16ರ ಐಪಿಎಲ್ ಆವೃತ್ತಿಯ ಟ್ರೋಫಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಮುಡಿಗೇರಿಸಿಕೊಂಡಿದ್ದರೆ, ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಆಗಿತ್ತು.