ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಗೆ ಬಿದ್ದಿದೆ. ಐಪಿಎಲ್‌ನ 50 ಪಂದ್ಯಗಳು ಪೂರ್ಣಗೊಳ್ಳುವ ಮೊದಲೇ ಚೆನ್ನೈ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವುದರೊಂದಿಗೆ ಸಿಎಸ್ಕೆ ತಂಡದ ಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ.
2024 ರಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಧೋನಿ ಪಡೆ ಈ ಬಾರಿ ಕೂಡ ಅದನ್ನೇ ಪುನರಾವರ್ತಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಅವರ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ಧೋನಿ ಬೇಸರದಿಂದ ಹೆಜ್ಜೆ ಹಾಕಿದರು. ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡ ನಂತರ, ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಧೋನಿ ನಾಯಕತ್ವದಲ್ಲಿಯೂ ಚೆನ್ನೈ ತಂಡ ಗೆಲುವಿನ ಲಯ ಕಂಡುಕೊಂಡಿಲ್ಲ.
ಐಪಿಎಲ್ 2025 ರಲ್ಲಿ ಚೆನ್ನೈ ತಂಡ ಸತತ ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಚೆನ್ನೈ ಆಡಿರುವ 9 ಪಂದ್ಯಗಳಲ್ಲಿ ಏಳರಲ್ಲಿ ಸೋಲನ್ನು ಎದುರಿಸಿದ್ದು, ಕೇವಲ 4 ಅಂಕಗಳನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ 43 ವರ್ಷದ ಧೋನಿ ಅವರಿಗೆ ಐಪಿಎಲ್‌ನಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಎಲ್ಲೆಡೆಯಿಂದ ನಿರಂತರವಾಗಿ ಸಲಹೆ ಬರುತ್ತಿವೆ. ಆದರೆ ಅವರು ಇನ್ನೂ ಚೆನ್ನೈ ತಂಡದಲ್ಲಿದ್ದಾರೆ. ಈಗ ಧೋನಿ ಅವರಿಗೆ ವಿಶ್ವದ ದಿಗ್ಗಜ ವಿಕೆಟ್ ಕೀಪರ್ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಕೂಡ ನಿವೃತ್ತಿ ಹೊಂದಲು ಕೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಆಡಮ್ ಗಿಲ್‌ಕ್ರಿಸ್ಟ್ ಅವರು ಐಪಿಎಲ್ 2025 ರ ನಂತರ ಧೋನಿ ನಿವೃತ್ತಿ ಹೊಂದಬೇಕು. ಧೋನಿ ಐಪಿಎಲ್ ಮತ್ತು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಪ್ರತಿಭೆ. ಅವರು ಇನ್ನು ಮುಂದೆ ಆಟದಲ್ಲಿ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿದಿರಬಹುದು. ಆದರೆ ಭವಿಷ್ಯಕ್ಕಾಗಿ ಅವರು ಮುಂದಿನ ವರ್ಷ ಐಪಿಎಲ್‌ನಲ್ಲಿ ಇರಬೇಕಾಗಿಲ್ಲ. ನಾನು ಅವರನ್ನು ಪ್ರೀತಿಸುತ್ತೇನೆ. ಧೋನಿ ನೀವು ಒಬ್ಬ ಚಾಂಪಿಯನ್ ಮತ್ತು ಐಕಾನ್ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್ 2025 | ಇದು ನನ್ನ ಮೈದಾನ: ಗೆದ್ದ ನಂತರ ಕೆ ಎಲ್ ರಾಹುಲ್‌ಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!
ಅದಲ್ಲದೆ ಮುಂದಿನ ಐಪಿಎಲ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಬೇಕಾದ ಸಮಯವಿದೆ ಎಂದಿರುವ ಗಿಲ್‌ಕ್ರಿಸ್ಟ್, ಮಹೇಂದ್ರ ಸಿಂಗ್ ಧೋನಿ ಫ್ರಾಂಚೈಸಿಯನ್ನು ತೊರೆಯಬೇಕು. ಧೋನಿ, ಕ್ರಿಕೆಟ್ ಆಟದಲ್ಲಿ ಸಾಬೀತುಪಡಿಸಲು ಬೇರೆನೂ ಇಲ್ಲ. ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಅವರಿಗೆ ಏನು ಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಆದರೆ ನಾನು ಹೇಳುತ್ತಿದ್ದೇನೆ, ಭವಿಷ್ಯಕ್ಕಾಗಿ ಅವರು ಐಪಿಎಲ್‌ನಲ್ಲಿ ಆಡುವ ಅಗತ್ಯ ಇಲ್ಲ ಎಂದಿದ್ದಾರೆ.
ಐಪಿಎಲ್ 2025 ರ ಆರಂಭಕ್ಕೂ ಮುನ್ನ, ಧೋನಿ ಕಾರ್ಯಕ್ರಮವೊಂದರಲ್ಲಿ ತಮ್ಮ ಕ್ರಿಕೆಟ್‌ನ ಕೊನೆಯ ಕೆಲವು ವರ್ಷಗಳನ್ನು ಆನಂದಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು. “ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2019 ರಿಂದ ನಿವೃತ್ತಿ ಹೊಂದಿದ್ದೇನೆ. ಆದ್ದರಿಂದ ಐಪಿಎಲ್‌ನಿಂದ ನಿವೃತ್ತಿ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ ನಾನು ಕೆಲವು ವರ್ಷಗಳ ಕ್ರಿಕೆಟ್ ಅನ್ನು ಆನಂದಿಸಲು ಬಯಸಿದ್ದೇನೆ. ಹೀಗಾಗಿ ಎಷ್ಟು ವರ್ಷಗಳ ಕಾಲ ನಾನು ಆಡಲು ಸಾಧ್ಯವಾಗುತ್ತದೆಯೋ ಅಷ್ಟು ವರ್ಷಗಳವರೆಗೆ ಆಡುತ್ತೇನೆ ಎಂದು ಹೇಳಿದ್ದರು.
5 ಬಾರಿಯ ಚಾಂಪಿಯನ್ ಇದೇ ಮೊದಲ ಬಾರಿಗೆ ಸತತ ಆವೃತ್ತಿಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಶೆ ಅನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಇದು ನಿವೃತ್ತಿಯ ಮುನ್ಸೂಚನೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
