ಐಪಿಎಲ್ 18ನೇ ಆವೃತ್ತಿ ಅಂತಿಮ ಘಟ್ಟ ತಲುಪಲು ಇನ್ನೆರಡು ಪಂದ್ಯಗಳು ಮಾತ್ರ ಬಾಕಿಯಿವೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಇಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಜೂನ್ 3 ರಂದು ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸ್ಪರ್ಧೆ ನಡೆಸಲಿದೆ.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯದ ಚಿತ್ರಣವನ್ನೇ ಬದಲಿಸಲಿದ್ದಾರೆ. ಪಂಜಾಬ್ ಹಾಗೂ ಮುಂಬೈ ಒಟ್ಟಾರೆ ಐಪಿಎಲ್‌ನಲ್ಲಿ 32 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ 15ರಲ್ಲಿ ಜಯ ಸಾಧಿಸಿದೆ. ಆದರೆ ಈ ಪ್ರಸಕ್ತ ಸಾಲಿನಲ್ಲಿ ಪಂಜಾಬ್ ತಂಡ ಪ್ರದರ್ಶನ ಅಮೋಘವಾಗಿದೆ. ಪಂಜಾಬ್ ಚೊಚ್ಚಲ ಕಪ್ ಗೆಲ್ಲುವ ಕನಸಿನಲ್ಲಿದೆ. ಹಾಗೆಯೆ ಮುಂಬೈ ಇಂಡಿಯನ್ಸ್ ಕೂಡ ಆರನೇ ಬಾರಿಗೆ ಟ್ರೋಫಿ ಕೈಗೆತ್ತಿಕೊಳ್ಳುವ ಯೋಜನೆಯಲ್ಲಿದೆ.
ಅಹಮದಾಬಾದ್‌ನ ಕ್ರೀಡಾಂಗಣ ಈಗಾಗಲೇ 42 ಪಂದ್ಯಗಳಿಗೆ ಆತಿಥ್ಯವನ್ನು ನೀಡಿದೆ. ಈ ವೇಳೆ ಮೊದಲು ಹಾಗೂ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡಗಳು ತಲಾ 21 ಬಾರಿ ಗೆದ್ದಿವೆ. ಈ ಮೈದಾನದಲ್ಲಿ 243 ರನ್ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಈ ಅಂಗಳದಲ್ಲಿ 204 ರನ್‌ಗಳನ್ನು ಗುರಿ ಮುಟ್ಟಲಾಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಬ್ಯಾಟಿಂಗ್ ಮೊದಲ ಬಾರಿಗೆ ಮಾಡಿದ ತಂಡ 6 ಪಂದ್ಯಗಳನ್ನು ಗೆದ್ದಿದೆ. ಇನ್ನು ಭಾನುವಾರದ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್ ಸಿಗುವ ಸಾಧ್ಯತೆ ಇದೆ.
ಇದನ್ನು ಓದಿದ್ದೀರಾ? BREAKING NEWS | ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭಮನ್ ಗಿಲ್ ಆಯ್ಕೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಹಾಕಿಕೊಡಬೇಕು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಮುಂಬೈ ತಂಡದಲ್ಲಿ ಸ್ಟಾರ್ ಬೌಲರ್‌ಗಳು ಇದ್ದಾರೆ. ಇವರು ಎದುರಾಳಿ ಬ್ಯಾಟರ್‌ಗಳ ರಣತಂತ್ರವನ್ನು ಬುಡಮೇಲು ಮಾಡಬಹುದು. ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಮಿಚೆಲ್ ಸ್ಯಾಂಟ್ನರ್ ಎಂದಿನಂತೆ ಸ್ಪಿನ್ ಜಾದು ನಡೆಸಬೇಕಿದೆ. ಅಂದಾಗ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ನನಸಾಗುತ್ತದೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಯುವಕರೇ ಬಲವಾಗಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಜೋಡಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲಿಸ್, ನಾಯಕ ಶ್ರೇಯಸ್ ಅಯ್ಯರ್, ನೆಹಲ್ ವಧೇರಾ, ಶಶಾಂಕ್ ಸಿಂಗ್ ಮಹತ್ವದ ಪಂದ್ಯದಲ್ಲಿ ಪರಿಣಾಮ ಉಂಟುಮಾಡಬೇಕಿದೆ. ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಕೈಲ್ ಜೇಮಿಸನ್, ವಿಜಯ್ ಕುಮಾರ್ ವೈಶಾಖ್, ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ಇನ್ನು ಗಾಯದ ಕಾರಣದಿಂದ ಮೈದಾನದಿಂದ ದೂರ ಉಳಿದಿದ್ದ ಯುಜುವೇಂದ್ರ ಚಹಾಲ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.
ಪಂದ್ಯವಾಡುವ ಉಭಯ ತಂಡಗಳ ಸಂಭಾವ್ಯ ಆಟಗಾರರು
ಮುಂಬೈ: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ರಿಚರ್ಡ್ ಗ್ಲೀಸನ್/ರೀಸ್ ಟಾಪ್ಲೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್
ಪಂಜಾಬ್: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೈಮಿಸನ್, ಯುಜುವೇಂದ್ರ ಚಾಹಲ್, ವಿಜಯಕುಮಾರ್ ವೈಶಾಖ್
ಪಂದ್ಯದ ಸಮಯ: ಸಂಜೆ 7.30
ನೇರ ಪ್ರಸಾರ: ಜಿಯೋ ಸ್ಟಾರ್, ಸ್ಟಾರ್ ಸ್ಪೋರ್ಟ್ಸ್