ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಶುಭಾರಂಭಗೈದಿದೆ.
ಗೆಲ್ಲಲು 175 ರನ್‌ಗಳ ಗುರಿಯನ್ನು ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಫಿಲ್ ಸಾಲ್ಟ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯವರ ಭರ್ಜರಿ ಅರ್ಧಶತಕದ ನೆರವಿನಿಂದ 16.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿಯನ್ನು ಸಾಧಿಸಿ, ಗೆಲುವು ಸಾಧಿಸಿತು.
ಆರ್‌ಸಿಬಿ ಪರವಾಗಿ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಇಳಿದಿದ್ದ ವಿರಾಟ್ ಕೊಹ್ಲಿ, 36 ಎಸೆತಗಳಲ್ಲಿ 59 ರನ್ ಸಿಡಿಸಿ, ಔಟಾಗದೆ ಉಳಿದರು. ಇನ್ನೋರ್ವ ಆರಂಭಿಕ ಆಟಗಾರ ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅಜಿಂಕ್ಯಾ ರಹಾನೆ ನೇತೃತ್ವದ ಕೆಕೆಆರ್ ಒಂದು ಹಂತದಲ್ಲಿ 107 ರನ್ ಗಳಿಸಿ, ಕೇವಲ ಒಂದು ವಿಕೆಟ್ ಕಳೆದುಕೊಂಡು, ಭರ್ಜರಿ ಮೊತ್ತವನ್ನು ಕಲೆ ಹಾಕುವ ಸೂಚನೆ ನೀಡಿತ್ತು. ಆದರೆ, ಕೊನೆಯ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ನಡೆಸಿದ ಆರ್‌ಸಿಬಿಯ ಬೌಲರ್‌ಗಳು 174 ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ಗಳನ್ನು ಪಡೆಯುವ ಮೂಲಕ ನಿಯಂತ್ರಿಸುವಲ್ಲಿ ಸಫಲರಾಗಿದ್ದರು.
ಕೆಕೆಆರ್ ಪರ ನಾಯಕನ ಆಟವಾಡಿದ ಅಜಿಂಕ್ಯಾ ರಹಾನೆ, 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 56 ರನ್ ಗಳಿಸಿ, ಅರ್ಧಶತಕದ ಆಟವಾಡಿದರು. ಇವರಿಗೆ ಸುನಿಲ್ ನರೇನ್ 44 ರನ್ (5 ಬೌಂಡರಿ, 3 ಸಿಕ್ಸ್) ಸಾಥ್ ನೀಡಿದರು.
ಆರ್‌ಸಿಬಿ ತಂಡದ ಪರ ಉತ್ತಮ ಬೌಲಿಂಗ್ ನಡೆಸಿದ ಕೃನಾಲ್ ಪಾಂಡ್ಯ, ನಿಗದಿತ 4 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ, ಮೂರು ಪ್ರಮುಖ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.
