ಇಂಡಿಯನ್ ಪ್ರೀಮಿಯರ್ ಲೀಗ್ನ 58ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಇದರಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ಅಂಕವನ್ನು ಮಾತ್ರ ಪಡೆದುಕೊಂಡಿದೆ. ಆದರೆ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿಲ್ಲ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಗೆದ್ದು 2 ಅಂಕಗಳನ್ನು ಪಡೆದುಕೊಂಡಿದ್ದರೆ 18 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸುತ್ತಿತ್ತು. ಇದೀಗ ಆರ್ಸಿಬಿ ಪಡೆಯ ಪ್ಲೇಆಫ್ ಪ್ರವೇಶ ಖಚಿತವಾಗಲು ಮುಂದಿನ ಪಂದ್ಯದವರೆಗೆ ಕಾಯಬೇಕು. ಅಂದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಗೆದ್ದರೆ ಪ್ಲೇಆಫ್ಗೆ ಪ್ರವೇಶಿಸಲಿದೆ.
ಅದಕ್ಕೂ ಮುನ್ನ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡ ಸೋಲಿಸಬೇಕು. ಇಂದು (ಮೇ 18) ನಡೆಯಲಿರುವ ಆರ್ಆರ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಲ್ಲಿ ಪಂಜಾಬ್ ಸೋಲನುಭವಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಆಡುವುದು ಖಚಿತವಾಗಲಿದೆ.
ಒಂದು ವೇಳೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಗೆದ್ದರೆ, ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಗೆದ್ದರೆ ಸಾಕು. ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ ಕೂಡ ಆರ್ಸಿಬಿ ತಂಡದ ಪ್ಲೇಆಫ್ ಖಚಿತವಾಗಲಿದೆ.
ಇದನ್ನು ಓದಿದ್ದೀರಾ? ಸ್ಲಿಪ್ನಲ್ಲಿ ವಿಕೆಟ್ ಕೀಪರ್ ನಿಂತಿದ್ದಕ್ಕೆ 5 ರನ್ ನೀಡಿದ ಅಂಪೈರ್; ಏನಿದು ಹೊಸ ನಿಯಮ?
ಹೀಗಾಗಿ ಇಂದು ನಡೆಯಲಿರುವ 2 ಪಂದ್ಯಗಳ ಫಲಿತಾಂಶದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಪ್ರವೇಶ ನಿರ್ಧಾರವಾಗಲಿದೆ. ಇನ್ನು ಈ ಎರಡು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆದ್ದರೆ, ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಅಥವಾ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದರೆ ಸಾಕು. ಈ ಮೂಲಕ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು.
ರಾಹುಲ್ಗೆ ಇತಿಹಾಸ ಸೃಷ್ಟಿಸುವ ಅವಕಾಶ
ಐಪಿಎಲ್ 2025 ರ ಋತುವಿನ 60 ನೇ ಲೀಗ್ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಲಿದ್ದು, ಈ ಎರಡೂ ತಂಡಗಳ ನಡುವಿನ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣುಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಕೆ ಎಲ್ ರಾಹುಲ್ ಅವರ ಮೇಲಿದೆ. ಅವರು ಈ ಋತುವಿನಲ್ಲಿ ಈವರೆಗೆ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಮುರಿಯಲು ರಾಹುಲ್ಗೆ ಉತ್ತಮ ಅವಕಾಶ ಒದಗಿಬಂದಿದೆ.
ಕೆ ಎಲ್ ರಾಹುಲ್ ಐಪಿಎಲ್ 2025ರ ಋತುವಿನಲ್ಲಿ 10 ಪಂದ್ಯಗಳಲ್ಲಿ 47.63 ಸರಾಸರಿಯಲ್ಲಿ 381 ರನ್ ಗಳಿಸಿದ್ದಾರೆ, ಇದರಲ್ಲಿ ಅವರು ಮೂರು ಅರ್ಧಶತಕದ ಇನಿಂಗ್ಸ್ಗಳನ್ನು ಆಡಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 142.16 ಆಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆ ಎಲ್ ರಾಹುಲ್ ಇನ್ನೂ 33 ರನ್ ಗಳಿಸಿದರೆ, ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 8000 ರನ್ಗಳ ಗಡಿಯನ್ನು ತಲುಪುತ್ತಾರೆ. ರಾಹುಲ್ ಈ ಸಾಧನೆ ಮಾಡಿದರೆ, ಅತಿ ಕಡಿಮೆ ಇನಿಂಗ್ಸ್ಗಳಲ್ಲಿ ಈ ದಾಖಲೆ ಮಾಡಿದ ಭಾರತೀಯ ಆಟಗಾರನಾಗುತ್ತಾನೆ. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುತ್ತಾರೆ.
ಕೊಹ್ಲಿ ತಮ್ಮ ಟಿ20 ವೃತ್ತಿಜೀವನದಲ್ಲಿ 243 ಇನಿಂಗ್ಸ್ಗಳಲ್ಲಿ 8000 ರನ್ಗಳನ್ನು ಪೂರೈಸಿದ್ದರು. ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನಿಂಗ್ಸ್ಗಳಲ್ಲಿ 8000 ರನ್ಗಳನ್ನು ಪೂರ್ಣಗೊಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು ಕೇವಲ 213 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು.