ಇಂದು ಐಪಿಎಲ್ 2025ರ 18ನೇ ಆವೃತ್ತಿಯ 2 ಮತ್ತು 3ನೇ ಪಂದ್ಯಗಳು ನಡೆಯಲಿದ್ದು, ಎರಡೂ ಪಂದ್ಯಗಳು ಮಹತ್ವದ್ದಾಗಿದ್ದು, ಪ್ರೇಕ್ಷಕರಿಗೆ ರಸದೌತಣ ಬಡಿಸಲಿವೆ. ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಮತ್ತು ಅನುಭವಿ ಬೌಲರ್‌ಗಳನ್ನು ಹೊಂದಿರುವ ಹಾಲಿ ರನ್ನರ್ಸ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಭಿಯಾನ ಆರಂಭಿಸಲಿದೆ. ಎರಡನೇ ಪಂದ್ಯವು ಐಪಿಎಲ್ ಟೂರ್ನಿಯಲ್ಲಿ ತಲಾ ಐದು ಸಲ ಪ್ರಶಸ್ತಿ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎರಡೂ ಟೀಂಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಹೈದರಾಬಾದ್ ಪರ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಆಟಗಾರರಿದ್ದಾರೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಚೇತರಿಸಿಕೊಂಡಿರುವುದು ತಂಡಕ್ಕೆ ಬಲ ಹೆಚ್ಚಿಸಿದೆ. ಅನುಭವಿ ವೇಗಿಗಳಾದ ನಾಯಕ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.
ರಾಜಸ್ಥಾನ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕಾಯಂ ನಾಯಕ ಸಂಜು ಸ್ಯಾಮ್ಸನ್ ಸಂಜು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ ಆಶ್ಚರ್ಯವಿಲ್ಲ. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ ಅಖಾಡದಲ್ಲಿದ್ದಾರೆ 13 ಕನ್ನಡಿಗ ಆಟಗಾರರು: ‘ಆರ್‌ಸಿಬಿ’ಯಲ್ಲಿ ಯಾರ್‍ಯಾರಿದ್ದಾರೆ?
ಚೆಪಾಕ್‌ನಲ್ಲಿ ನಡೆಯಲಿರುವ ಮುಂಬೈ ಹಾಗೂ ಚೆನ್ನೈ ಪಂದ್ಯ ಕೂಡ ಮತ್ತಷ್ಟು ರೋಚಕವಾಗಿದೆ. ಋತುರಾಜ್ ಗಾಯಕವಾಡ್ ನಾಯಕತ್ವದ ಚೆನ್ನೈ ತಂಡವು ತನ್ನ ಸ್ಪಿನ್ ವಿಭಾಗದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದೆ. ರವೀಂದ್ರ ಜಡೇಜ ಅವರೊಂದಿಗೆ ಆಫ್‌ಸ್ಪಿನ್ ದಂತಕಥೆ ಆರ್. ಅಶ್ವಿನ್, ನೂರ್ ಅಹಮದ್, ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತು ದೀಪಕ್ ಹೂಡಾ ತಂಡದಲ್ಲಿದ್ದಾರೆ. ಆಲ್‌ರೌಂಡರ್ ರಚಿನ್ ರವೀಂದ್ರ ಕೂಡ ಇವರಿಗೆ ಜೊತೆ ನೀಡುತ್ತಾರೆ. ನಾಯಕ ಋತುರಾಜ್, ರಾಹುಲ್ ತ್ರಿಪಾಠಿ, ಡೆವೊನ್ ಕಾನ್ವೆ ಹಾಗೂ ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಮುಂಬೈ ತಂಡದ ಬೌಲಿಂಗ್ ಶಕ್ತಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯುವುದು ಖಚಿತವಾಗಿಲ್ಲ. ನಾಯಕ ಹಾರ್ದಿಕ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಕಳೆದ ವರ್ಷದ ಟೂರ್ನಿಯ 3 ಪಂದ್ಯಗಳಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಒಂದು ಪಂದ್ಯದ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಅದು ಈ ಪಂದ್ಯದಲ್ಲಿ ಜಾರಿಯಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸುವರು. ಇದರಿಂದಾಗಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಅವರ ಮೇಲೆ ಅವಲಂಬಿತವಾಗಬಹುದು. ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಪ್ರಮುಖರಾಗಿದ್ದಾರೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಸೂರ್ಯ, ರೋಹಿತ್, ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್ ಅವರು ಅಬ್ಬರಿಸುವ ನಿರೀಕ್ಷೆಯಿದೆ.
ಪಂದ್ಯ ಆರಂಭ
ಆರ್‌ಆರ್ vs ಎಸ್‌ಆರ್‌ಎಚ್ : ಮಧ್ಯಾಹ್ನ 3.30
ಮುಂಬೈ vs ಚೆನ್ನೈ : ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್ ಸ್ಟಾರ್