18ನೇ ಆವತ್ತಿಯ 2025ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಇಂದು (ಜೂನ್ 3) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬಲಿಷ್ಠ ತಂಡಗಳಾದ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದು, ಯಾರೇ ಗೆದ್ದರೂ ನೂತನ ಚಾಂಪಿಯನ್‌ಗಳಾಗಿ ಹೊರಹೊಮ್ಮಲಿದ್ದಾರೆ. ಈ ಎರಡೂ ತಂಡಗಳು ಇದುವರೆಗೂ ಕಪ್ ಗೆಲ್ಲಲಾಗಿರಲಿಲ್ಲ. ಆ ಹಸಿವನ್ನು ಇಂದು ಯಾವುದಾದರೂ ಒಂದು ತಂಡ ತಣಿಸಿಕೊಳ್ಳಲಿದೆ. ಸೋತ ತಂಡ ಮತ್ತೆ ಆ ಕನಸನ್ನು ಮುಂದುವರೆಸಬೇಕಿದೆ. ಆದರೆ, ಇದುವರೆಗೂ ಕಪ್ ಗೆಲ್ಲದ ತಂಡವೊಂದು ಮೊದಲ ಬಾರಿ ಚಾಂಪಿಯನ್ ಆಗುವುದು ಇಂದಿನ ಫೈನಲ್ ಪಂದ್ಯದ ವಿಶೇಷ.
ಇದುವರೆಗಿನ 17 ಆವೃತ್ತಿಗಳಲ್ಲಿ 7 ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ. ಅದರಲ್ಲಿಯೂ ಚನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 5 ಸಲ ಕಪ್ ಎತ್ತಿ ಹಿಡಿದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮೂರು ಬಾರಿ ಚಾಂಪಿಯನ್ ಆಗಿದೆ. ರಾಯಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್ ಹಾಗೂ ಡೆಕ್ಕನ್ ಚಾರ್ಜಸ್ (ಈಗ ಈ ತಂಡ ಅಸ್ತಿತ್ವದಲ್ಲಿಲ್ಲ) ತಲಾ ಒಮ್ಮೊಮ್ಮೆ ಟ್ರೋಫಿ ಗೆದ್ದಿವೆ. ಆದರೆ, ಈ ತಂಡಗಳಾವುವೂ ಈ ಬಾರಿ ಫೈನಲ್ ಪ್ರವೇಶಿಸಲಾಗಿಲ್ಲ. ಹಾಗಾಗಿ ಹೊಸ ತಂಡಕ್ಕೆ ಈ ಸಲದ ಕಪ್ ಪಕ್ಕಾ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಮೊದಲು ಮೂರು ಬಾರಿ ಫೈನಲ್ ತಲುಪಿತ್ತು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹಾಗೂ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಫೈನಲ್ ಪಂದ್ಯಗಳಲ್ಲಿ ಸೋಲು ಕಂಡು ಹತಾಶೆ ಅನುಭವಿಸಿತ್ತು. 2017ರಿಂದಲೂ ಆರ್‌ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೆ’ ಎನ್ನುವ ಭರವಸೆಯಲ್ಲಿ ತಂಡಕ್ಕೆ ಅಪಾರ ಪ್ರೀತಿ ತೋರಿದ್ದಾರೆ. ಆದರೆ, ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಲೇಆಫ್ ತಲುಪುತ್ತಿದ್ದ ಆರ್‌ಸಿಬಿ, ಆನಂತರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ ನಿರಾಶೆ ಅನುಭವಿಸಿದೆ. ಆದಾಗ್ಯೂ, ಈ ಬಾರಿ ಪ್ಲೇಆಫ್‌ನಲ್ಲಿಯೂ ಸಹ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿಯೇ ಪಂಜಾಬ್ ಎದುರು ಗೆದ್ದು ಫೈನಲ್ ಪ್ರವೇಶಿಸಿದೆ. ಚಾಂಪಿಯನ್ ಆಗಲು ಹವಣಿಸುತ್ತಿದೆ.
ಸಮತೋಲಿತ ತಂಡ ಆರ್‌ಸಿಬಿ
ಈ ಬಾರಿ ಆರ್‌ಸಿಬಿ ಸಮತೋಲಿತ ತಂಡವಾಗಿ ಕಂಡುಬರುತ್ತಿದೆ. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಆರ್‌ಸಿಬಿಗೆ ಬಲಿಷ್ಠ ಟಾಪ್ ಆರ್ಡರ್ ಬ್ಯಾಟಿಂಗ್ ಬಲವಿದ್ದರೂ ಬೌಲಿಂಗ್ ವಿಭಾಗ ದುರ್ಬಲವಾಗಿ ಕಾಣುತ್ತಿತ್ತು. ಹಾಗಾಗಿಯೇ ಪ್ಲೆ ಆಫ್‌ನಲ್ಲಿ ವಿಫಲವಾಗುತ್ತಿತ್ತು. ಆದರೆ, ಈ ಬಾರಿ ಬೌಲಿಂಗ್ ವಿಭಾಗ ಪುಟಿದೆದ್ದಿರುವುದು ಆರ್‌ಸಿಬಿಗೆ ದೊಡ್ಡ ಬಲ ತಂದುಕೊಟ್ಟಿದೆ. ಆಸ್ಟ್ರೇಲಿಯಾದ ವೇಗಿ ಬೌಲರ್ ಜೋಶ್ ಹೇಜಲ್‌ವುಡ್ ಪ್ರಮುಖ ಅಸ್ತ್ರವಾಗಿದ್ದಾರೆ. ಅವರು ಇದುವರೆಗೂ 11 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೂರ್ನಿಯ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 33 ರನ್ ನೀಡಿ 4 ವಿಕೆಟ್ ಪಡೆದು ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುಟಿದೆದ್ದ ಬೌಲಿಂಗ್ ಬಲ
ಭಾರತದ ವೇಗಿ ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಬೌಲಿಂಗ್‍ನಲ್ಲಿ ತಕ್ಕ ಸಾಥ್ ನೀಡುತ್ತಿದ್ದಾರೆ. ಸ್ಪಿನ್ನರ್‌ಗಳಾದ ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಮಿಂಚುತ್ತಿದ್ದಾರೆ. ಇಬ್ಬರೂ ಸಹ ಪಂದ್ಯ ಗೆಲ್ಲಿಸಿ ಪಂದ್ಯದ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಆಲ್‍ರೌಂಡರ್ ರೋಮಾರಿಯೊ ಶೆಫರ್ಡ್ ಜೊತೆಗೆ ಶ್ರೀಲಂಕಾದ ನುವಾನ್ ತುಷಾರ ಸಹ ಅಗತ್ಯವಿದ್ದಾಗ ತಂಡದ ನೆರವಿಗೆ ಬಂದಿದ್ದಾರೆ. ಹಾಗಾಗಿ ಆರ್‌ಸಿಬಿ ಬೌಲಿಂಗ್ ಯೂನಿಟ್ ಚೆನ್ನಾಗಿ ಕೆಲಸ ಮಾಡುತ್ತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಕೇವಲ 101 ರನ್‍ಗಳಿಗೆ ಆಲೌಟ್ ಮಾಡಿದ್ದು ಅದಕ್ಕೆ ದೊಡ್ಡ ನಿದರ್ಶನವಾಗಿದೆ.
ಈ ಲೇಖನ ಓದಿದ್ದೀರಾ?: ಐಪಿಎಲ್ ಫೈನಲ್‌ಗಿಂತ ಹೆಚ್ಚಾದ ಆರ್‌ಸಿಬಿ ಜ್ವರ, ಏನಿದು ವಿದ್ಯಮಾನ?
ಇನ್ನು ಆರ್‌ಸಿಬಿ ಕೇವಲ ಕೆಲವೇ ಆಟಗಾರರನ್ನು ಮಾತ್ರ ನಂಬಿ ಕುಳಿತಿಲ್ಲ. ಬದಲಿಗೆ ಇಡೀ ತಂಡವೇ ಸಾಂಘಿಕ ಹೋರಾಟ ನೀಡುತ್ತಿದೆ. ಆರ್‌ಸಿಬಿ 14 ಪಂದ್ಯಗಳನ್ನಾಡಿದ್ದು, 9 ವಿಭಿನ್ನ ಆಟಗಾರರು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವುದು ಅದಕ್ಕೆ ಸಾಕ್ಷಿಯಾಗಿದೆ. ಕೃನಾಲ್ ಪಾಂಡ್ಯ, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜೋಶ್ ಹೇಜಲ್‍ವುಡ್, ಟಿಮ್ ಡೇವಿಡ್, ರೋಮಾರಿಯೊ ಶೆಫರ್ಡ್, ಸುಯಾಶ್ ಶರ್ಮಾ ಹಾಗೂ ಜಿತೇಶ್ ಶರ್ಮಾ ಆ ಸಾಲಿನಲ್ಲಿದ್ದಾರೆ.
ಅತ್ಯುತ್ತಮ ಫಾರ್ಮ್ ಮುಂದುವರೆಸಿದ ವಿರಾಟ್ ಕೊಹ್ಲಿ
18 ವರ್ಷದಿಂದ ಆರ್‌ಸಿಬಿ ಪರವಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ಎಂದಿನಂತೆ ಈ ಬಾರಿಯೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. 14 ಪಂದ್ಯಗಳಲ್ಲಿ 8 ಅರ್ಧಶತಕಗಳೊಂದಿಗೆ 614 ರನ್ ಗಳಿಸಿದ್ದಾರೆ. ಅದರಲ್ಲಿಯೂ ಚೇಸಿಂಗ್‍ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು ಚೇಸ್ ಮಾಸ್ಟರ್ ಎಂಬ ಬಿರುದು ಪಡೆದಿದ್ದಾರೆ. ಇಡೀ ತಂಡಕ್ಕೆ ಸ್ಫೂರ್ತಿಯಾಗಿರುವ ಅವರು ಪ್ರತಿಷ್ಠೆ ಪಣಕ್ಕಿಟ್ಟು ಆಡುತ್ತಿದ್ದಾರೆ. ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಅವರೂ ಕೂಡ 4 ಅರ್ಧ ಶತಕ ಗಳಿಸಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡ ಅತ್ಯಂತ ಸಮತೋಲಿತ ತಂಡವಾಗಿ ಕಂಡುಬರುತ್ತಿದೆ.
ಈ ಸಲ ಆರ್‌ಸಿಬಿ ತಂಡದ ಮೈಲಿಗಲ್ಲುಗಳು
- 9 ವರ್ಷಗಳ ನಂತರ ಐಪಿಎಲ್ ಫೈನಲ್‌ಗೆ ಪ್ರವೇಶ ಪಡೆದಿದೆ.
- 9 ವರ್ಷಗಳ ನಂತರ ಲೀಗ್ ಹಂತದಲ್ಲಿ ಟಾಪ್ 2 ಸ್ಥಾನ ಪಡೆದಿದೆ
- ತನ್ನ ಇತಿಹಾಸದಲ್ಲೇ ಅತ್ಯುತ್ತಮ ಚೇಸ್ (228 ರನ್‌ಗಳು) ದಾಖಲಿಸಿದೆ
- 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದೆ
- 10 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಜಯ ದಾಖಲಿಸಿದೆ
- 7 ವರ್ಷಗಳ ನಂತರ ಡೆಲ್ಲಿಯಲ್ಲಿ ಡಿಸಿ ವಿರುದ್ಧ ಗೆದ್ದಿದೆ
- 6 ವರ್ಷಗಳ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದೆ
- ಮೊದಲ ಬಾರಿಗೆ ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲೂ ಚೆನ್ನೈ ವಿರುದ್ಧ ಜಯವನ್ನೂ ಪಡೆದಿದೆ
- ಲೀಗ್ ಹಂತದಲ್ಲಿ ಎಲ್ಲಾ ತವರಿನೇತರ (Away) ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ. 7ಕ್ಕೆ 7ರಲ್ಲಿಯೂ ಗೆಲುವು ದಾಖಲಿಸಿದೆ.
- ಐಪಿಎಲ್ ಸೀಸನ್‌ನಲ್ಲಿ ಯಾವುದೇ ತಂಡದಿಂದ ಮೊದಲ ಬಾರಿಗೆ 10 ಬೇರೆ ಆಟಗಾರರು 50+ ರನ್ ಗಳಿಸಿದ್ದಾರೆ.
- ಒಂದೇ ಸೀಸನ್‌ನಲ್ಲಿ 9 ವಿಭಿನ್ನ ಆರ್‌ಸಿಬಿ ಆಟಗಾರರು ಪ್ಲೇಯರ್ ಆಫ್ ದಿ ಮ್ಯಾಚ್ ಆಗಿರುವುದು ಇದೇ ಮೊದಲು
- ಐಪಿಎಲ್ ಪ್ಲೇಆಫ್‌ನಲ್ಲಿ ಪ್ರತಿಸ್ಪರ್ಧಿ ತಂಡವನ್ನು 15 ಓವರ್‌ಗಳೊಳಗೆ ಆಲೌಟ್ ಮಾಡಿದ ಮೊದಲ ತಂಡವಾಗಿದೆ.
ಪ್ರಶಸ್ತಿ ಕನಸಲ್ಲಿ ಪಂಜಾಬ್ ಕಿಂಗ್ಸ್
ಇನ್ನು, ಪಂಜಾಬ್ ಕಿಂಗ್ಸ್ ಸಹ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಲು ಕಾದು ಕುಳಿದಿದೆ. ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಲೀಗ್ ಹಂತದಲ್ಲಿ ಮತ್ತು ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ. ನಾಯಕ ಶ್ರೇಯಸ್ ಅಯ್ಯರ್‌ರವರ ಅಮೋಘ ಪ್ರದರ್ಶನವೇ ಇದಕ್ಕೆ ಕಾರಣವಾಗಿದೆ. ಈ ಮೊದಲು 2014ರಲ್ಲಿ ಪಂಜಾಬ್ ಫೈನಲ್ ತಲುಪಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್ ಗಳಿಸಿತು (199/5). ವೃದ್ಧಿಮಾನ್ ಸಹಾ 55 ಎಸೆತಗಳಲ್ಲಿ 115* ರನ್ ಗಳಿಸಿದರು. ಆದರೆ KKR 19.3 ಓವರ್‌ಗಳಲ್ಲಿ 7 ವಿಕೆಟ್‌ಗೆ 200 ರನ್ ಗಳಿಸಿ (200/7) ಗುರಿಯನ್ನು ತಲುಪಿತು. ಮನೀಷ್ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿದರು. ಅಲ್ಲಿಗೆ ಪಂಜಾಬ್ ಕನಸು ನುಚ್ಚು ನೂರಾಗಿತ್ತು. ಈಗ ಅಂತಹದೇ ಮತ್ತೊಂದು ಫೈನಲ್ ತಲುಪಿ ಕುಳಿತಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಲೀಗ್ ಹಂತದಲ್ಲಿ ಪಂಜಾಬ್ ಅತ್ಯುತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. 14 ಪಂದ್ಯಗಳಲ್ಲಿ 9 ಗೆಲುವಿನೊಂದಿಗೆ 19 ಅಂಕಗಳಿಸಿ ‘ನೆಟ್ ರನ್ ರೇಟ್’ನಲ್ಲಿ ಆರ್‌ಸಿಬಿಗಿಂತ ಕೊಂಚ ಮೇಲಿರುವ ಮೂಲಕ ಟೇಬಲ್ ಟಾಪರ್ ಎನಿಸಿಕೊಂಡರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪಂಜಾಬ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಶ್ರೇಯಸ್ ಅಯ್ಯರ್ 5 ಅರ್ಧ ಶತಕಗಳೊಂದಿಗೆ 603 ರನ್ ಗಳಿಸಿ ತಂಡದ ಆಧಾರಸ್ತಂಭವಾಗಿದ್ದಾರೆ. ಪ್ರಭುಸಿಮ್ರಾನ್ ಸಿಂಗ್ 4 ಅರ್ಧ ಶತಕಗಳೊಂದಿಗೆ 523 ರನ್ ಗಳಿಸಿದರೆ ಪ್ರಿಯಾಂಶ್ ಆರ್ಯ 1 ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 451 ರನ್ ಗಳಿಸು ಉತ್ತಮ ಆರಂಭಿಕ ಆಟಗಾರರೆನಿಸಿದ್ದಾರೆ. ನೇಹಲ್ ವಧೇರ, ಶಶಾಂಕ್ ಸಿಂಗ್ ಮತ್ತು ಜೋಶ್ ಇಂಗ್ಲಿಷ್ ಕೂಡ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ಅರ್ಷದೀಪ್ ಸಿಂಗ್ 18 ವಿಕೆಟ್ ಗಳಿಸಿದರೆ, ಮಾರ್ಕೊ ಯಾನ್ಸನ್ 16 ವಿಕೆಟ್ ಪಡೆದಿದ್ದಾರೆ. ಯುಜುವೇಂದ್ರ ಚಹಲ್ (15 ವಿಕೆಟ್) ಮತ್ತು ಹರ್ ಪ್ರೀತ್ ಬ್ರಾರ್ (10 ವಿಕೆಟ್) ಸ್ಪಿನ್ ಬೌಲಿಂಗ್ ಶಕ್ತಿಯಾಗಿದ್ದಾರೆ. ಕೈಲ್ ಜೆಮಿಸನ್ ಇತ್ತೀಚೆಗೆ ತಂಡ ಸೇರಿದ್ದಾರೆ. ವೈಶಾಲ್ ವಿಜಯ್ ಕುಮಾರ್ ಸಹ ತಂಡದಲ್ಲಿದ್ದಾರೆ. ಪಂಜಾಬ್ ತಂಡದ ಬ್ಯಾಟಿಂಗ್‍ಗೆ ಹೋಲಿಸಿದರೆ ಬೌಲಿಂಗ್ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ. ಒಟ್ಟಾರೆ ತಂಡವಾಗಿ ಪಂಜಾಬ್‍ನಲ್ಲಿ ಅನುಭವಿಗಳ ಕೊರತೆಯಿದೆ. ಆದರೆ, ಕಳೆದ ವರ್ಷ ಕೆಕೆಆರ್ ಪರವಾಗಿ ಟ್ರೋಫಿ ಗೆಲ್ಲಿಸಿದ ಅನುಭವಿ ನಾಯಕ ಶ್ರೇಯಸ್ ಅಯ್ಯರ್ ಬಲ ಅವರಿಗಿದೆ. ಫೀಲ್ಡ್ ಪ್ಲೇಸ್‍ಮೆಂಟ್ ಮತ್ತು ಬೌಲಿಂಗ್ ಚೇಂಜ್‍ನಲ್ಲಿ ಅವರು ಸಾಕಷ್ಟು ಯಶ ಕಂಡಿದ್ದಾರೆ.
ಒಟ್ಟಾರೆಯಾಗಿ ಎರಡು ಹೊಸ ಮತ್ತು ಬಲಿಷ್ಠ ತಂಡಗಳು ಈ ಬಾರಿ ಐಪಿಎಲ್ ಫೈನಲ್‍ನಲ್ಲಿ ಮುಖಾಮುಖಿಯಾಗುತ್ತಿವೆ. ಯಾರು ಗೆದ್ದರೂ ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸುತ್ತಾರೆ. ಒಂದು ವೇಳೆ ಆರ್‌ಸಿಬಿ ಗೆದ್ದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುವುದರಲ್ಲಿ ಸಂಶಯವಿಲ್ಲ.