- ಪ್ರತಿಭಟನೆಯು ಅಶಿಸ್ತಿನ ವರ್ತನೆ ಎಂದ ಹಿರಿಯ ಅಥ್ಲೀಟ್
- ʻನಾವು ಶಾಂತಿಯುತವಾಗಿ ಕುಳಿತಿದ್ದೇವೆ ಎಂದ ಕುಸ್ತಿಪಟುಗಳು
ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʻಪ್ರತಿಭಟನೆ ಅಶಿಸ್ತುʼ
ಕುಸ್ತಿಪಟುಗಳದ್ದು ನಕಾರಾತ್ಮಕ ಧೋರಣೆ , ಪ್ರತಿಭಟನೆಯು ಅಶಿಸ್ತಿನ ವರ್ತನೆಯಾಗಿದೆ ಎಂದು ಹಿರಿಯ ಅಥ್ಲೀಟ್ ಮತ್ತು ಐಒಎ ಅಧ್ಯಕ್ಷೆ ಪಿಟಿ ಉಷಾ ಕಿಡಿಕಾರಿದ್ದಾರೆ.
ʻಕುಸ್ತಿಪಟುಗಳು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಸಮಿತಿಯು ತನ್ನ ವರದಿಯನ್ನು ಬಿಡುಗಡೆ ಮಾಡುವ ಮುನ್ನವೇ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲʼ ಎಂದು ರೆಸ್ಲರ್‌ಗಳ ನಡೆಗೆ ಉಷಾ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
“ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು. ಕನಿಷ್ಠ ಸಮಿತಿಯ ವರದಿಗಾಗಿ ಕಾಯಬೇಕಿತ್ತು. ಕುಸ್ತಿಪಟುಗಳ ಪ್ರತಿಭಟನೆ ಕ್ರೀಡಾ ಕ್ಷೇತ್ರಕ್ಕೆ ಮತ್ತು ದೇಶಕ್ಕೆ ಒಳ್ಳೆಯದಲ್ಲ. ಇದು ನಕಾರಾತ್ಮಕ ಧೋರಣೆ” ಎಂದು ಉಷಾ ಹೇಳಿದ್ದಾರೆ.
ʻನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೇವೆʼ
ಪಿಟಿ ಉಷಾ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು, ʻಮಹಿಳಾ ಅಥ್ಲೀಟ್ ಆಗಿರುವ ಅವರು (ಪಿಟಿ ಉಷಾ) ಇತರ ಮಹಿಳಾ ಅಥ್ಲೀಟ್‌ಗಳ ಮಾತನ್ನು ಕೇಳುತ್ತಿಲ್ಲ. ಇಲ್ಲಿ ಅಶಿಸ್ತು ಎಲ್ಲಿದೆ, ನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೇವೆ. ತಮ್ಮ ಅಕಾಡೆಮಿಯಲ್ಲಿ ಮಾಡಲಾಗುತ್ತಿರುವ ತಾರತಮ್ಯದ ಕುರಿತು ಸ್ವತಃ ಪಿಟಿ ಉಷಾ ಅವರೇ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡು ಕಣ್ಣೀರಿಟ್ಟಿರಲಿಲ್ಲವೇʼ ಎಂದು ಕುಸ್ತಿಪಟುಗಳು ಪ್ರಶ್ನಿಸಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್‌ಐ) ಮತ್ತು ಅದರ ಮುಖ್ಯಸ್ಥ ಸಿಂಗ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದರು. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ವರದಿ ನೀಡುವಂತೆ ಸೂಚಿಸಲಾಗಿತ್ತು. ತನಿಖೆ ನಡೆಸಿದ್ದ ಆರು ಸದಸ್ಯರ ಸಮಿತಿಯು ಏಪ್ರಿಲ್ 5 ರಂದು ವರದಿ ನೀಡಿತ್ತು. ಆದರೆ ಈ ವರದಿಯನ್ನು ಸಚಿವಾಲಯವು ಇನ್ನೂ ಬಹಿರಂಗಗೊಳಿಸಿಲ್ಲ.
ಈ ಸುದ್ದಿ ಓದಿದ್ದೀರಾ?: ಕುಸ್ತಿ ಪಟುಗಳ ಪ್ರತಿಭಟನೆ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟಿಸ್
ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಅಂತಾರಾಷ್ಟ್ರೀಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೊಗಟ್, ರವಿ ದಹಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಅನೇಕರು ಕಳೆದ ಐದು ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ರಾಜಕಾರಣಿಗಳು ಮತ್ತು ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಏಳು ಮಂದಿ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೂರು ನೀಡಿದರೂ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ಕುಸ್ತಿಪಟುಗಳು ಭಾನುವಾರದಿಂದ ತಮ್ಮ ಪ್ರತಿಭಟನೆ ಪುನರಾರಂಭಿಸಿದ್ದಾರೆ. ಜೊತೆಗೆ, ಪೊಲೀಸರು ಎಫ್‌ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದ್ದಾರೆ.
ಈ ಹಿಂದೆ ಆಶ್ವಾಸನೆ ನೀಡಿದ್ದರಿಂದ ನಾವು ಜನವರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೆವು. ಅದು ಸುಳ್ಳು ಆಶ್ವಾಸನೆಯಾಗಿದ್ದು, ಈ ಬಾರಿ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸುವಂತೆ ಕೋರಿ ಪ್ರತಿಭಟನಾನಿರತ ಕುಸ್ತಿಪಟುಗಳು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಬಳಿಕ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಮತ್ತು ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಈ ಕುರಿತು ವಿವರ ಕಲೆಹಾಕಿ ಶುಕ್ರವಾರದ ವಿಚಾರಣೆಗೆ ನೀಡುವಂತೆ ತಿಳಿಸಿದೆ.