ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದಿನಿಂದ (ಆಗಸ್ಟ್ 18) ಪ್ರಾರಂಭವಾಗಲಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ. ಹನ್ನೊಂದು ತಿಂಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿ ನಾಯಕತ್ವ ವಹಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಅಭಿಮಾನಿಗಳ ಜೊತೆ ಆಯ್ಕೆ ಸಮಿತಿಯ ಕಣ್ಣು ಕೂಡ ನೆಟ್ಟಿದೆ.
ಬಹುತೇಕ ಒಂದು ವರ್ಷದ ನಂತರ ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡುತ್ತಿರುವ ಬುಮ್ರಾ ಮೇಲೆ ಹಲವು ನಿರೀಕ್ಷೆಗಳಿವೆ. ಭಾರತದ ಪ್ರಬಲ ವೇಗದ ದಾಳಿಯ ಅನಿವಾರ್ಯ ಭಾಗವಾಗಿರುವುದರಿಂದ, 29 ವರ್ಷದ ಬುಮ್ರಾ ಅವರ ಪುನರಾಗಮನವು ಭಾರತ ತಂಡ ಮುಂದೆ ಪಾಲ್ಗೊಳ್ಳುವ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ ಈ ಸರಣಿ ನಿರ್ಣಾಯಕವಾಗಿದೆ.
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಋತುರಾಜ್ ಗಾಯಕ್‌ವಾಡ್, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಸರಣಿಯಲ್ಲಿ ಆಡುತ್ತಿದ್ದಾರೆ. ಕರ್ನಾಟಕದ ಪ್ರಸಿದ್ಧ ಕೃಷ್ಣ ಕೂಡ ಹಲವು ದಿನಗಳ ಬಿಡುವಿನ ಬಳಿಕ ತಂಡಕ್ಕೆ ಮರಳಿದ್ದಾರೆ. ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆಯಲು ಪ್ರಸಿದ್ಧ ಕೃಷ್ಣ ಅವರಿಗೆ ಪ್ರಸ್ತುತ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯವಾಗಿದೆ.
ಭಾರತ ತಂಡ ಇಲ್ಲಿಯವರೆಗೂ ಐರ್ಲೆಂಡ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳೊಂದಿಗೆ ಎಂಟು ಪಂದ್ಯಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ. ಐರ್ಲೆಂಡ್ ತಂಡಕ್ಕೂ ತವರಿನಲ್ಲಿ ಆಡುವ ಸರಣಿ ಪ್ರಮುಖವಾಗಿದೆ.
ಮಳೆ ಭೀತಿ
ಮೂರು ಪಂದ್ಯಗಳ ಸರಣಿಯಾಡುವ ಡಬ್ಲಿನ್‌ನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿರುವ ಕಾರಣ ಮಳೆಯ ಭೀತಿ ಎದುರಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದು ಶೇ. 68 ರಷ್ಟು ಮಳೆ ಬೀಳುವ ಸಾಧ್ಯತೆಯಿದೆ. ಉಳಿದ ಪಂದ್ಯಗಳ ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆ ಶೇ. 96 ಕ್ಕಿಂತ ಹೆಚ್ಚಾಗಿರುತ್ತದೆ ಎಂದು ಊಹಿಸಲಾಗಿದೆ.
ಭಾರತ – ಐರ್ಲೆಂಡ್ ಪ್ರವಾಸ ವೇಳಾಪಟ್ಟಿ:
18 ಆಗಸ್ಟ್ 2023 – 1 ನೇ ಟಿ20 ಪಂದ್ಯ – ದಿ ವಿಲೇಜ್, ಡಬ್ಲಿನ್
20 ಆಗಸ್ಟ್ 2023 – 2 ನೇ ಟಿ20 ಪಂದ್ಯ – ದಿ ವಿಲೇಜ್, ಡಬ್ಲಿನ್
23 ಆಗಸ್ಟ್ 2023 – 3 ನೇ ಟಿ20 ಪಂದ್ಯ – ದಿ ವಿಲೇಜ್, ಡಬ್ಲಿನ್
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಭಾರತ:
ಜಸ್ಪ್ರೀತ್ ಬುಮ್ರಾ (ನಾಯಕ), ರಿತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಹಬಾಜ್ ಅಹ್ಮದ್ , ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್.
ಐರ್ಲೆಂಡ್:
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೈರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋರ್ಕೋಮ್ ಬೆಂಜಮಿನ್ ವೈಟ್ ಮತ್ತು ಕ್ರೇಗ್ ಯಂಗ್.
ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಜಿಯೋ ಸಿನಿಮಾ ಆಪ್,ಸ್ಪೋರ್ಟ್ಸ್ 18 ಮತ್ತು ಡಿಡಿ ಸ್ಪೋರ್ಟ್ಸ್