ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಜಯಭೇರಿ ಬಾರಿಸುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು 3-1ರಿಂದ ಕೈವಶ ಮಾಡಿಕೊಂಡ ಬೆನ್ನಲ್ಲೇ ಬಿಸಿಸಿಐ, 2024 ನೇ ಸಾಲಿನ ಗುತ್ತಿಗೆ ಒಪ್ಪಂದ ಪಟ್ಟಿಯನ್ನು ಇಂದು (BCCI Central Contract) ಪ್ರಕಟಿಸಿದ್ದು, ಪ್ರಮುಖ ಇಬ್ಬರು ಆಟಗಾರರನ್ನು ಪಟ್ಟಿಯಿಂದ ತೆಗೆದು ಹಾಕಿದೆ.
ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳಿಂದ ಸುದ್ದಿಯಾಗಿದ್ದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಕೈಬಿಟ್ಟಿದೆ. ಟೆಸ್ಟ್ ಕ್ರಿಕೆಟ್ ಅನ್ನು ಆಡುವುದರಿಂದ ತಪ್ಪಿಸಿಕೊಳ್ಳಲು ಇವರಿಬ್ಬರೂ ನೆಪ ಹೇಳಿಕೊಂಡು ತಪ್ಪಿಸಿಕೊಂಡಿದ್ದರು ಎಂಬ ಆರೋಪದ ನಡುವೆಯೇ ಈ ಬೆಳವಣಿಗೆ ನಡೆದಿದೆ.
ರಣಜಿ ಟ್ರೋಫಿಗಿಂತ ಐಪಿಎಲ್ ಆಡುವುದೇ ಮುಖ್ಯ ಎನ್ನುವಂತೆ ವರ್ತನೆ ತೋರಿದ್ದರಿಂದ ಇಬ್ಬರನ್ನೂ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ.
“ಈ ಹಂತದ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎನ್ನುವುದನ್ನು ಗಮನಿಸಬೇಕು” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸ್ಪಷ್ಟವಾಗಿ ಸೂಚನೆ ನೀಡಿತ್ತು ಎಂದೂ ತಿಳಿಸಲಾಗಿದೆ.
ಉಳಿದಂತೆ ಗ್ರೇಡ್ ಆಧರಿಸಿದ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಆ ಪಟ್ಟಿ ಹೀಗಿದೆ:
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ
ಗ್ರೇಡ್ ಎ: ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ
ಗ್ರೇಡ್ ಬಿ: ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್.
ಬಿಸಿಸಿಐ ಆಯ್ಕೆ ಸಮಿತಿಯು ವೇಗದ ಬೌಲಿಂಗ್ ವಿಭಾಗಕ್ಕೆ ಆಕಾಶ್ ದೀಪ್, ವಿಜಯ್ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.
