ಭಾರತೀಯ ಕ್ರಿಕೆಟ್ ಪ್ರಿಯರಿಗೆ ಇದು ನಿಜಕ್ಕೂ ಶುಭ ಸುದ್ದಿ. ವಿಶ್ವ ಕ್ರೀಡಾ ಹಬ್ಬ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ಸೇರ್ಪಡೆಗೊಳ್ಳಲಿದೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸೇರ್ಪಡೆಗೊಳಿಸಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿಳಿಸಿದೆ.
ಮುಂಬೈನಲ್ಲಿ ನಡೆದ ಐಒಸಿಯ 141ನೇ ಅಧಿವೇಶನದಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದದಲ್ಲಿ ಐದು ಹೆಚ್ಚುವರಿ ಕ್ರೀಡೆಗಳಾದ ಕ್ರಿಕೆಟ್, ಸ್ಕ್ವಾಷ್, ಬೇಸ್‌ಬಾಲ್ ಮತ್ತು ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್ ಮತ್ತು ಲ್ಯಾಕ್ರೋಸ್‌ಅನ್ನು ಸೇರಿಸಲು ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
1896ರಲ್ಲಿ ಒಲಿಂಪಿಕ್ಸ್ ಶುರುವಾದ ನಂತರ ಒಮ್ಮೆ ಮಾತ್ರ 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಗಳನ್ನು ಆಡಿಸಲು ಅವಕಾಶ ನೀಡಲಾಗಿತ್ತು. ಬೆಲ್ಜಿಯಂ, ಫ್ರಾನ್ಸ್, ಗ್ರೇಟ್ ಬ್ರಿಟನ್ ಮತ್ತು ನೆದರ್ಲ್ಯಾಂಡ್ಸ್ ನಾಲ್ಕು ತಂಡಗಳು ಪದಕಕ್ಕಾಗಿ ಪೈಪೋಟಿ ನಡೆಸಿ ಗ್ರೇಟ್ ಬ್ರಿಟನ್ ಚಿನ್ನ ಗೆದ್ದರೆ, ಫ್ರಾನ್ಸ್ ಬೆಳ್ಳಿ ಪದಕ ಜಯಿಸಿತ್ತು.
The proposal from the Organising Committee of the Olympic Games Los Angeles 2028 (@LA28) to include five new sports in the programme has been accepted by the IOC Session.
Baseball/softball, cricket (T20), flag football, lacrosse (sixes) and squash will be in the programme at…
— IOC MEDIA (@iocmedia) October 16, 2023
ಆನಂತರದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗದ ಕಾರಣ ಒಲಿಂಪಿಕ್ಸ್‌ನಿಂದ ಕೈಬಿಡಲಾಗಿತ್ತು. 1970ರ ದಶಕದಿಂದ ಕ್ರಿಕೆಟ್ ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಭಾರತದ ಕ್ರಿಕೆಟ್ ಆಯೋಜಕ ಬಿಸಿಸಿಐ ವಿಶ್ವದ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಗಿದೆ. ಕ್ರಿಕೆಟ್‌ನ ಜನಪ್ರಿಯತೆ ಕಂಡು ವಿಶ್ವದ ಹಲವು ರಾಷ್ಟ್ರಗಳು ತಾವು ವಿಶ್ವಕಪ್‌ನಂಥ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿವೆ.
ಈ ಸುದ್ದಿ ಓದಿದ್ದೀರಾ? ಒಲಿಂಪಿಕ್ಸ್: ಟಿ20 ಸೇರ್ಪಡೆಗೆ ಅನುಮತಿ ನೀಡಿದ ಐಒಸಿ
2028 ರ ಅಮೆರಿಕದ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ಟಿ20 ಕ್ರಿಕೆಟ್ ಪಂದ್ಯಗಳು ಇರುತ್ತವೆ. ಒಲಿಂಪಿಕ್ ಕಾರ್ಯಕ್ರಮಕ್ಕೆ ಕ್ರಿಕೆಟ್ ಅನ್ನು ಸೇರಿಸುವುದರಿಂದ ಐಒಸಿಯು ಭಾರತದ ಪ್ರಸಾರ ಹಕ್ಕುಗಳ ಮೌಲ್ಯವನ್ನು 100 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಹೆಚ್ಚಿಸುವ ನಿರೀಕ್ಷೆಯಿದೆ.