ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಈಗಾಗಲೇ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ 2-1 ರಿಂದ ಮುನ್ನಡೆಯಲ್ಲಿರುವುದರಿಂದ, ಸಿಡ್ನಿಯಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದರಷ್ಟೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಪ್ರವೇಶ ಪಡೆಯುವ ಸಾಧ್ಯತೆಯಿದೆ.
ಇದರ ಮಧ್ಯೆ, ಮೊದಲ ದಿನದ ಆಟದ ಅಂತ್ಯದ ವೇಳೆಗೆ ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬೂಮ್ರಾ ಹಾಗೂ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ನಡುವಿನ ಕಾಳಗ ನೆಟ್ಟಿಗರ ಗಮನ ಸೆಳೆದಿದೆ. ಕಳೆದ ಮೆಲ್ಬೋರ್ನ್ ಪಂದ್ಯದಲ್ಲಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ 19 ವರ್ಷದ ಕೊನ್‌ಸ್ಟಸ್ ಮೊದಲ ಇನಿಂಗ್ಸ್‌ನಲ್ಲೇ ಅರ್ಧ ಶತಕ ಗಳಿಸಿ ಭರವಸೆ ಮೂಡಿಸಿದ್ದರು. ಭಾರತದ ವೇಗಿ ಬೂಮ್ರಾರನ್ನು ಸಿಕ್ಸರ್‌ಗಳ ಮೂಲಕ ದಂಡಿಸುವ ಜೊತೆಗೆ ವಿರಾಟ್ ಕೊಹ್ಲಿ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಇದರಿಂದಾಗಿ ಈ ಯುವ ಆಟಗಾರನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಬೂಮ್ರಾ ಕ್ಲೀನ್ ಬೋಲ್ಡ್ ಮಾಡುವ ಮೂಲಕ ಕೊನ್‌ಸ್ಟಸ್‌ಗೆ ತಿರುಗೇಟು ನೀಡಿದ್ದರು. ಅಲ್ಲಿಂದ ಆರಂಭವಾದ ಇವರಿಬ್ಬರ ನಡುವಿನ ಕ್ರೀಡಾ ಪೈಪೋಟಿ ಕೊನೆಯ ಪಂದ್ಯದಲ್ಲೂ ಮುಂದುವರಿದಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 185ಕ್ಕೆ ಆಲೌಟ್ ಆಯಿತು. ಇದಾದ ಬಳಿಕ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ಪ್ರಾರಂಭಿಸಿತು. ಬೂಮ್ರಾ ಎಸೆದ ಮೊದಲ ಎಸೆತವನ್ನೇ ಬೌಂಡರಿ ಗೆರೆ ದಾಟಿಸುವ ಮೂಲಕ ಕೊನ್‌ಸ್ಟಸ್ ಅಬ್ಬರದ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ದಿನದಾಟದ ಕೊನೆಯ ಓವರ್‌ನಲ್ಲೂ ನಾನ್-ಸ್ಟ್ರೈಕರ್‌ನಲ್ಲಿದ್ದ ಕೊನ್‌ಸ್ಟಸ್, ಬೂಮ್ರಾ ಜತೆ ಜಗಳಕ್ಕಿಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಮಹಿಳಾ ವಿಶ್ವ ಚೆಸ್ ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆರ್ ವೈಶಾಲಿಗೆ ಕಂಚು
ಇದಕ್ಕೆ ಉತ್ತರವಾಗಿ ದಿನದಾಟದ ಕೊನೆಯ ಎಸೆತದಲ್ಲಿ ಕೇವಲ ಎರಡು ರನ್ ಗಳಿಸಿದ್ದ ಆಸೀಸ್‌ನ ಉಸ್ಮಾನ್ ಖ್ವಾಜಾ ವಿಕೆಟ್ ಉರುಳಿಸುವ ಮೂಲಕ ಭಾರತದ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಉಸ್ಮಾನ್ ಕ್ಯಾಚ್ ಹಿಡಿಯುತ್ತಿದ್ದಂತೆಯೇ ಭಾರತದ ಆಟಗಾರರು ಕೊನ್‌ಸ್ಟಸ್ ಅವರತ್ತ ತೆರಳಿ ದಿಟ್ಟಿಸಿ ನೋಡುತ್ತಾ ಏಟಿಗೆ ಎದುರೇಟು ನೀಡಿದರು.
ಇದೇ ವೇಳೆ ಬೂಮ್ರಾ ಕೊನ್‌ಸ್ಟಸ್ ಅವರತ್ತ ತೆರಳಿ ದಿಟ್ಟಿಸಿ ನೋಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ನಾಳೆ ಇಬ್ಬರು ಮತ್ತೆ ಮುಖಾಮುಖಿ ಆಗಲಿದ್ದು, ಯಾರು ಮೇಲುಗೈ ಸಾಧಿಸಬಹುದು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಒಟ್ಟಿನಲ್ಲಿ ಇವರಿಬ್ಬರ ನಡುವಿನ ಪೈಪೋಟಿ, ಸಿಡ್ನಿ ಪಂದ್ಯವನ್ನು ಮತ್ತಷ್ಟು ರೋಚಕವನ್ನಾಗಿಸಲಿದೆ.
Good Story. ಮತ್ತಷ್ಟು ಬರೆಯಿಸಿ ಕೊಪ್ಪದ್.