ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ನಾಲ್ವರು ಬ್ಯಾಟರ್‌ಗಳ ಅರ್ಧ ಶತಕದ ನೆರವಿನಿಂದ 311/6 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಹಾಗೂ 19ರ ಯುವ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 89 ರನ್ಗಳ ಜೊತೆಯಾಟವಾಡಿದ ಬಳಿಕ ಕೊನ್‌ಸ್ಟಸ್ ವಿಕೆಟ್ ಒಪ್ಪಿಸಿದರು. ಆದರೆ ಇದಕ್ಕೂ ಮುನ್ನ ಯುವ ದಾಂಡಿಗ ತನ್ನ ಪಾದಾರ್ಪಣೆ ಪಂದ್ಯದಲ್ಲಿಯೆ ಕೇವಲ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 60 ರನ್ ಚಚ್ಚಿದ್ದರು.
ಇದಾದ ಬಳಿಕ ಜೊತೆಗೂಡಿದ ಉಸ್ಮಾನ್ ಖ್ವಾಜಾ ಹಾಗೂ ಮಾರ್ನಸ್ ಲಾಬುಶೇನ್ 2ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ 121 ಎಸೆತಗಳಲ್ಲಿ 57 ರನ್ ಬಾರಿಸಿದ್ದ ಖ್ವಾಜಾ ಬುಮ್ರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಔಟಾದರು.
ಈ ಸುದ್ದಿ ಓದಿದ್ದೀರಾ? U19 ಮಹಿಳೆಯರ ಏಷ್ಯಾಕಪ್: ಭಾರತ ತಂಡ ಚಾಂಪಿಯನ್
ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಮಾರ್ನಸ್ ಲಾಬುಶೇನ್ 145 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 72 ರನ್ ಸಿಡಿಸಿದರು.
ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಆಗಮಿಸಿದ ಸ್ಪೋಟಕ ಆಟಗಾರ ಟ್ರಾವಿಸ್ ಹೆಡ್ (0) ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (4) ಕೂಡ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆದಾಗ್ಯೂ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಅನುಭವಿ ಆಟಗಾರ ಸ್ಟೀವ್ ಸ್ಮಿತ್, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಪರಿಣಾಮ 6ನೇ ವಿಕೆಟ್‌ಗೆ 53 ರನ್ಗಳ ಜೊತೆಯಾಟ ಮೂಡಿಬಂತು. ಈ ಹಂತದಲ್ಲಿ ಆಕಾಶ್ ದೀಪ್ ಎಸೆದ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (31) ಔಟಾದರು. ಆದರೆ ಮತ್ತೊಂದೆಡೆ ಬಿರುಸಿನ ಆಟವಾಡಿದ ಸ್ಟೀವ್ ಸ್ಮಿತ್ 68 ರನ್ಗಳೊಂದಿಗೆ ಅಜೇಯರಾಗಿ ಉಳಿದರು.
ಟೀಂ ಇಂಡಿಯಾ ಪರ ಜಸ್‌ಪ್ರೀತ್ ಬುಮ್ರಾ ಮತ್ತೆ ತಮ್ಮ ಕರಾರುವಾಕ್ಕಾದ ಬೌಲಿಂಗ್ ಮೂಲಕ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
