ಜೂನ್ 1ರಂದು ಎಲ್ಲ ಮಾದರಿಯ ಕ್ರಿಕೆಟ್‌ಗೆ ಟೀಮ್ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಕೇದಾರ್ ಜಾಧವ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ತನ್ನ ಎಕ್ಸ್(ಟ್ವಿಟ್ಟರ್) ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, “1500 ಗಂಟೆಗಳ ಕಾಲ ನನ್ನ ವೃತ್ತಿ ಜೀವನದುದ್ದಕ್ಕೂ ನೀವು ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿದ್ದೇನೆ” ಎಂದು ಕೇದಾರ್ ಜಾಧವ್ ಸೋಮವಾರ(ಜೂನ್ 3) ತಿಳಿಸಿದ್ದಾರೆ.
ಕೇದಾರ್ ಜಾಧವ್ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2014ರ ನವೆಂಬರ್ 16ರಂದು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದ್ದರು.
Thank you all For your love and support throughout my Career from 1500 hrs
Consider me as retired from all forms of cricket— IamKedar (@JadhavKedar) June 3, 2024
73 ಏಕದಿನ ಪಂದ್ಯಗಳನ್ನಾಡಿರುವ ಜಾಧವ್ 42.09 ಸರಾಸರಿಯಲ್ಲಿ 1,389 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಶತಕ ಮತ್ತು ಆರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ, 27 ವಿಕೆಟ್‌ಗಳನ್ನು ಕೂಡ ಪಡೆದಿದ್ದಾರೆ.
9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 20.33ರ ಸರಾಸರಿಯಲ್ಲಿ 58 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 93 ಪಂದ್ಯಗಳಲ್ಲಿ 22.15 ಸರಾಸರಿಯಲ್ಲಿ 1,196 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
Kedar Jadhav has announced his retirement from all forms of cricket. ⭐ pic.twitter.com/NqxkfkdKCJ
— Mufaddal Vohra (@mufaddal_vohra) June 3, 2024
ಜಾಧವ್ 2020ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದರ ನಡುವೆ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ, ಹಲವು ಬಾರಿ ಕಂಬ್ಯಾಕ್ ಮಾಡಲು ಯತ್ನಿಸಿದರೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅದರಂತೆ ಇದೀಗ 10 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅಲ್ಲದೆ ಈ ವಿದಾಯದೊಂದಿಗೆ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ಗೂ ಕೇದಾರ್ ಜಾಧವ್ ನಿವೃತ್ತಿ ಘೋಷಿಸಿದ್ದಾರೆ.
ಐಪಿಎಲ್: ಆರ್‌ಸಿಬಿ ಪರ ಚೊಚ್ಚಲ ಪಂದ್ಯವಾಡಿದ್ದ ಕೇದಾರ್ ಜಾಧವ್
2009ರಲ್ಲಿ ಐಪಿಎಲ್‌ನಲ್ಲಿ ಕ್ರಿಕೆಟ್ ಜೀವನ ಆರಂಭಿಸಿದ್ದ ಕೇದಾರ್ ಜಾಧವ್, ಆರ್‌ಸಿಬಿ ಪರ ಚೊಚ್ಚಲ ಪಂದ್ಯವಾಡಿದ್ದರು. ಇದಾದ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಭಾಗವಾಗಿದ್ದರು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಆ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು.
— StanMSD (@MSvidz) June 3, 2024
2016 ಮತ್ತು 2017 ರಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಾಧವ್, 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದರು. ಮೂರು ವರ್ಷಗಳ ಕಾಲ ಸಿಎಸ್ಕೆ ತಂಡದಲ್ಲಿದ್ದ ಕೇದಾರ್ ಜಾಧವ್ ಅವರನ್ನು 2021ರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2 ಕೋಟಿ ರೂ.ಗೆ ಖರೀದಿಸಿತ್ತು.
ಇನ್ನು 2023 ರ ಐಪಿಎಲ್ ಆರ್‌ಸಿಬಿ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಕೇದಾರ್ ಜಾಧವ್ 2 ಪಂದ್ಯಗಳಲ್ಲಿ ಒಟ್ಟು 12 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅದಾಗ್ಯೂ ಈ ಬಾರಿಯ ಹರಾಜಿಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ, 38 ವರ್ಷ ಕೇದರ್ ಜಾಧವ್ ಅವರನ್ನು ಹರಾಜು ಪಟ್ಟಿಯಿಂದ ಕೈ ಬಿಡಲಾಗಿತ್ತು. ಇದರೊಂದಿಗೆ ಜಾಧವ್ ಅವರ ಐಪಿಎಲ್ ಕೆರಿಯರ್ ಕೂಡ ಮುಗಿದಿತ್ತು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕೇದರ್ ಜಾಧವ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
1985ರ ಮಾರ್ಚ್ 26ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ್ದ ಕೇದಾರ್ ಜಾಧವ್, 2024ರ ಐಪಿಎಲ್‌ನ ವೇಳೆ ಮರಾಠಿ ಭಾಷೆಯಲ್ಲಿ ಕಮೆಂಟರಿ ಕೂಡ ಮಾಡಿದ್ದರು.
