ನಾಕೌಟ್‌ ಪಂದ್ಯ | ಆರ್‌ಸಿಬಿ ಗೆಲುವಿಗೆ ಕಾರಣವಾದದ್ದು ಧೋನಿ ಬಾರಿಸಿದ 110 ಮೀಟರ್‌ನ ಸಿಕ್ಸ್!

Date:

Advertisements

2024ರ ಐಪಿಎಲ್‌ನ ಮೊದಲ ಎಂಟು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯವೊಂದರಲ್ಲಿ ಮಾತ್ರ ಕೇವಲ ಒಂದು ಗೆಲುವು ಸಾಧಿಸಿದ್ದ ಆರ್‌ಸಿಬಿ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಅನ್ನು ರೋಚಕವಾಗಿ ಸೋಲಿಸುವ ಮೂಲಕ, ಯಾರೂ ಊಹಿಸದೇ ಇರುವ ರೀತಿಯಲ್ಲಿ ಪ್ಲೇ-ಆಫ್ ಹಂತಕ್ಕೆ ತಲುಪಿದೆ. ಸದ್ಯ 4ನೇ ತಂಡವಾಗಿ ಪ್ಲೇ-ಆಫ್‌ನಲ್ಲಿ ಆಡಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮೇ 18) ಆರ್‌ಸಿಬಿ 27 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿಗೆ ಇದು ಸತತ ಆರನೇಯ ಗೆಲುವು.

ಟಿ20ಯಲ್ಲಿ ‘ಮ್ಯಾಚ್ ಫಿನಿಶರ್’ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದ ಹಿರಿಯ ಆಟಗಾರ ಎಂ ಎಸ್ ಧೋನಿಯವರಿಗೂ ಕೂಡ ಬೆಂಗಳೂರಿನ ಈ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಅಚ್ಚರಿ ಎಂದರೆ, ಒಂದು ಲೆಕ್ಕದಲ್ಲಿ ಆರ್​ಸಿಬಿ ತಂಡ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಮಹೇಂದ್ರ ಸಿಂಗ್ ಧೋನಿ. ಇದು ಹೇಗೆ ಎಂದು ಆಲೋಚಿಸಬೇಡಿ. ಯಾಕೆಂದರೆ ಈ ಮಾತನ್ನು ಖುದ್ದು ಆರ್‌ಸಿಬಿ ತಂಡದ ವಿಕೆಟ್ ಕೀಪರ್, ಸ್ಫೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಒಪ್ಪಿಕೊಂಡಿದ್ದಾರೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಸ್ಟೋರಿ.

Advertisements

ಪ್ಲೇ ಆಫ್ ತಲುಪಬೇಕಾದರೆ ಬೆಂಗಳೂರು ಈ ಪಂದ್ಯದಲ್ಲಿ ಕನಿಷ್ಠ 18 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್​ಸಿಬಿ, ನಾಯಕ ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 218 ರನ್ ಗಳಿಸಿತ್ತು.

ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲಬೇಕಿತ್ತಲ್ಲದೇ, ಚೆನ್ನೈ ತಂಡವನ್ನು 201 ರನ್‌ ಗಡಿ ದಾಟದಂತೆ ನೋಡಿಕೊಳ್ಳಬೇಕಿತ್ತು. ಅದನ್ನು ಕೊನೆಗೂ ಸಾಧಿಸುವಲ್ಲಿ ಯಶಸ್ವಿಯಾಯಿತು.

ಚೆನ್ನೈ ತಂಡವು ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಾಯಕ ರುತುರಾಜ್ ಗಾಯಕ್ವಾಡ್ ಯಶ್ ದಯಾಳ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಚೆನ್ನೈ, ಅಂತಿಮ ಹಂತದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಜೊತೆಯಾಟವನ್ನು ನಿರ್ಮಿಸಿ ತಂಡವನ್ನು ಪ್ಲೇ ಆಫ್​ಗೇರಿಸಲು ಹತ್ತಿರಕ್ಕೆ ತಂದರು.

ಕೊನೆಯ ಓವರ್‌ನಲ್ಲಿ ಚೆನ್ನೈ 17 ರನ್ ಗಳಿಸಿದರಷ್ಟೇ ಪ್ಲೇ-ಆಫ್ ಪ್ರವೇಶಿಸುವ ಅವಕಾಶ ಹೊಂದಿತ್ತು. ಈ ಓವರ್‌ನ ಮೊದಲ ಎಸೆತವೇ ಚೆನ್ನೈ ಪರ ಆಯಿತು. ಧೋನಿ 20ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು. ಇತ್ತ ಆರ್​ಸಿಬಿ ಪರ ಅನನುಭವಿ ಎಡಗೈ ವೇಗದ ಬೌಲರ್ ಯಶ್ ದಯಾಳ್ ಇದ್ದರು.

ಧೋನಿ ದಯಾಳ್ ಅವರ ಮೊದಲ ಫುಲ್‌ಟಾಸ್ ಎಸೆತವನ್ನು ಲಾಂಗ್ ಲೆಗ್ ಬೌಂಡರಿಯಿಂದ ಸಿಕ್ಸ್‌ ಬಾರಿಸಿದರು. ಅದು ಬೌಂಡರಿಯಿಂದ ಹೊರಗೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿ ಕ್ರೀಡಾಂಗಣದ ಹೊರಗೆ ತಲುಪಿತು. ಇದು 110 ಮೀಟರ್ ಉದ್ದದ ಸಿಕ್ಸರ್ ಆಗಿದ್ದು, ಈ ಋತುವಿನಲ್ಲಿ ದಾಖಲೆಯಾಗಿದೆ. ಹೀಗಾಗಿ 5 ಎಸೆತಗಳಲ್ಲಿ ಕೇವಲ 11 ರನ್‌ಗಳ ಅಗತ್ಯವಿದ್ದ ಕಾರಣ ಇದು ಸಿಎಸ್‌ಕೆಗೆ ಭರವಸೆ ಮೂಡಿಸಿತು.

ಕಳೆದ ವರ್ಷ ಇದೇ ರೀತಿಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಮೇಲೆ ಸತತ 5 ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಹೀಗಿರುವಾಗ ಯಶ್ ದಯಾಳ್ ಯಾವ ರೀತಿ ಬೌಲಿಂಗ್ ಮಾಡುತ್ತಾರೆ?, ಅದೇ ಘಟನೆ ಮರುಕಳಿಸುತ್ತಾ ಎಂಬ ಭಯ ಆರ್​ಸಿಬಿಯಲ್ಲಿತ್ತು. ಆದರೆ ಇಲ್ಲಿ ಧೋನಿಯ ಈ ಸಿಕ್ಸರ್ ಆರ್​ಸಿಬಿ ಜಯಕ್ಕೆ ನೆರವಾಯಿತು.

ಧೋನಿ ಹೊಡೆತದಿಂದ ಚೆಂಡು ಸ್ಟೇಡಿಯಂನಿಂದ ಹೊರಬಿತ್ತು. ಹೀಗಾಗಿ, ಅಂಪೈರ್‌ಗಳು ಎರಡನೇ ಎಸೆತಕ್ಕೆ ನೂತನ ಚೆಂಡಿನ ಮೊರೆ ಹೋದರು. ಇದು ದಯಾಳ್‌ಗೆ ಅನುಕೂಲಕರವಾಯಿತು. ಮೊದಲ ಇನ್ನಿಂಗ್ಸ್‌ನ ವೇಳೆ ಕೆಲಹೊತ್ತು ಮಳೆ ಬಂದಿದ್ದರಿಂದ ಹಿಂದಿನ ಚೆಂಡು ಅದಾಗಲೇ ಸಾಕಷ್ಟು ಒದ್ದೆಯಾಗಿತ್ತು. ಬೌಲಿಂಗ್‌ ಮಾಡಲು ತುಂಬಾ ಕಷ್ಟಕರವಾಗುತ್ತಿತ್ತು. ಇದನ್ನು ಬದಲಾಯಿಸುವಂತೆ ಆರ್​ಸಿಬಿ ನಾಯಕ ಹಲವು ಬಾರಿ ಅಂಪೈರ್ ಬಳಿ ಮನವಿ ಮಾಡಿದ್ದರೂ ತಿರಸ್ಕರಿಸುತ್ತಿದ್ದರು. ಈಗ ಬದಲಾದ ಚೆಂಡು ಸಂಪೂರ್ಣ ಒಣಗಿದ್ದು, ಸ್ಲೋ ಬಾಲ್ ಮತ್ತು ಯಾರ್ಕರ್ ಅನ್ನು ನಿಖರವಾಗಿ ಬಳಸಿ ದಯಾಳ್ ಇದರ ಲಾಭ ಪಡೆದರು.

ಸಿಕ್ಸರ್ ನಂತರ, ದಯಾಳ್ ಮುಂದಿನ ಚೆಂಡನ್ನು ನಿಧಾನವಾಗಿ ಎಸೆದರು. ಧೋನಿ ಹೊಡೆತವು ನೇರವಾಗಿ ಲಾಂಗ್‌ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ವಪ್ನಿಲ್ ಸಿಂಗ್ ಕೈಗೆ ಹೋಯಿತು. ಕ್ಯಾಚ್‌ ಹಿಡಿಯುವಲ್ಲಿ ಸ್ವಪ್ನಿಲ್ ಸಿಂಗ್ ಯಶಸ್ವಿಯಾದರು. ಧೋನಿ ಹೊಡೆದ ಸಿಕ್ಸ್‌ನಿಂದ ಮಂಕಾಗಿದ್ದ ಆರ್‌ಸಿಬಿ ಅಭಿಮಾನಿಗಳು, ಔಟಾಗುತ್ತಿದ್ದಂತೆಯೇ ಪಂದ್ಯ ತಮ್ಮ ಕಡೆಗೆ ವಾಲಲಿದೆ ಎಂದು ನಂಬಿದರು.

ಧೋನಿ ಸಿಕ್ಸ್ ಹೊಡೆದಾಗ ಕುಣಿದು ಕುಪ್ಪಳಿಸಿದ್ದ ಚೆನ್ನೈ ತಂಡ ಹಾಗೂ ಅಭಿಮಾನಿಗಳು, ಔಟಾದಾಗ ಪ್ಲೇ ಆಫ್‌ ಕನಸು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಂಡರು. ಧೋನಿ ಔಟಾದ ವೇಳೆ ಚೆನ್ನೈಗೆ 4 ಎಸೆತಗಳಲ್ಲಿ 11 ರನ್‌ಗಳ ಅವಶ್ಯಕತೆ ಇತ್ತು.

ಇದನ್ನು ಓದಿದ್ದೀರಾ? ಫೀನಿಕ್ಸ್‌ನಂತೆ ಎದ್ದು ಬಂದ ಆರ್‌ಸಿಬಿ ಪ್ಲೇ-ಆಫ್‌ಗೆ; ಸಿಎಸ್‌ಕೆ ಮನೆಗೆ

ಆ ಬಳಿಕ ಕ್ರೀಸ್‌ಗೆ ಆಗಮಿಸಿದ ಶಾರ್ದೂಲ್ ಠಾಕೂರ್ ಅವರು ಮೊದಲ ಎಸೆತದಲ್ಲಿ ರನ್ ಗಳಿಸಲು ಯತ್ನಿಸಿ, ನಾನ್‌ ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜಾಗೆ ಬ್ಯಾಟಿಂಗ್‌ ನೀಡಲು ಶ್ರಮಿಸಿದರು. ಆದರೆ ಆ ಪ್ರಯತ್ನ ಕೈಗೂಡಲಿಲ್ಲ. ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿ, ಜಡೇಜಾ ಕ್ರೀಸ್‌ಗೆ ಬರುವಂತೆ ನೋಡಿಕೊಂಡರು. ಈ ವೇಳೆ ಈ ವೇಳೆ ಚೆನ್ನೈಗೆ 2 ಎಸೆತಗಳಲ್ಲಿ 10 ರನ್‌ಗಳ ಅವಶ್ಯಕತೆ ಇತ್ತು.

ಬೌಲರ್ ಯಶ್ ದಯಾಳ್, ಎರಡೂ ಎಸೆತಗಳನ್ನು ‘ಸ್ಲೋ ಬಾಲ್’ ಹಾಕಿ ಜಡೇಜಾ ಬ್ಯಾಟ್‌ನಿಂದ ರನ್ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ‘ಹೀರೋ’ ಎನಿಸಿಕೊಂಡರು. ಧೋನಿ ಸಿಕ್ಸ್‌ ಬಳಿಕ ಉಳಿದ 4 ಎಸೆತಗಳಲ್ಲಿ ಯಶ್ ದಯಾಳ್, ಕೇವಲ 1 ರನ್ ನೀಡುವ ಮೂಲಕ ಆರ್​ಸಿಬಿ ಪಂದ್ಯವನ್ನು ಗೆಲ್ಲುವಂತೆ ಮಾಡಿದ್ದಲ್ಲದೇ, ಪ್ಲೇ ಆಫ್‌ಗೆ ತಲುಪಲು ಪ್ರಮುಖ ಪಾತ್ರ ವಹಿಸಿದರು.

‘ಧೋನಿ ಸಿಕ್ಸರ್ ಕಾರಣ’ ಎಂದು ಒಪ್ಪಿಕೊಂಡ ದಿನೇಶ್ ಕಾರ್ತಿಕ್

ನಾಕೌಟ್ ಪಂದ್ಯ ಮುಗಿದ ಬಳಿಕ ಆರ್‌ಸಿಬಿಯ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಮಾತುಕತೆಯ ವೇಳೆ ಮಾತನಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, “ಎಂಎಸ್ ಧೋನಿ ಚಿನ್ನಸ್ವಾಮಿಯ ಹೊರಗೆ 110 ಮೀಟರ್‌ ಸಿಕ್ಸರ್ ಬಾರಿಸಿದ್ದು ನಮ್ಮ ಪಾಲಿಗೆ ಈ ಬೆಳವಣಿಗೆ ಅತ್ಯುತ್ತಮವಾಗಿತ್ತು. ಚೆಂಡು ಕ್ರೀಡಾಂಗಣದಿಂದಲೇ ಕಾಣೆಯಾದ್ದರಿಂದ ಅಂಪಾಯರ್ ನಮಗೆ ಹೊಸ ಚೆಂಡನ್ನು ನೀಡುವಂತಾಯಿತು. ಹೊಸ ಬಾಲ್ ಸಿಕ್ಕಿದ್ದು, ನಮ್ಮ ಗೆಲುವಿಗೆ ಕಾರಣವಾಯಿತು” ಎಂದು ಹೇಳಿಕೆ ನೀಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X